ಹೊನ್ನಾವರ:ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮವನ್ನು ವಿನಾಯಕ ಸ್ತುತಿಯೊಂದಿಗೆ ಯಕ್ಷಗಾನ ಶೈಲಿಯಲ್ಲಿ ಶ್ರೀ ಅನಂತ ಹೆಗಡೆ ದಂತಳಿಕೆ ನಡೆಸಿಕೊಟ್ಟರು. ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಲಕ್ಷ್ಮೀನಾರಾಯಣ ಕಾಶಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನವನ್ನು ಕಲಾಪೋಷಕರಾದ ಸಪ್ತಕ ಸಂಸ್ಥೆಯ ಸಂಚಾಲಕರಾದ ಶ್ರೀ ಜಿ.ಎಸ್. ಹೆಗಡೆಯವರಿಗೆ ಮತ್ತು ವಿದ್ಯಾವಾರಿಧಿ ಶ್ರೀ ಲಕ್ಷ್ಮೀನಾರಾಯಣ ಭಟ್ ಹಾದಿಗಲ್ಲುರವರಿಗೆ ನೀಡಿ ಗೌರವಿಸಲಾಯಿತು. ಕಲಾಪೋಷಕ ಸಮ್ಮಾನ ಸ್ವೀಕರಿಸಿದ ಶ್ರೀ ಜಿ. ಎಸ್. ಹೆಗಡೆಯವರು ಮಾತನಾಡಿ ವೃತ್ತಿಯಲ್ಲಿ ಕಾರ್ಯಕ್ಷೇತ್ರ ಕಲಾಜೀವನಕ್ಕೆ ಪೂರಕವಾಗದಿದ್ದರೂ ಕೆರೆಮನೆ ಕುಟುಂಬದ ನಂಟಿನಿಂದ ‘ಸಪ್ತಕ’ ಸಂಸ್ಥೆ ಸ್ಥಾಪಿಸಿ ಕಲೆಯ ಎಲ್ಲಾ ಆಯಾಮಗಳಲ್ಲಿ ಕಲಾ ಸೇವೆ ಮಾಡುತ್ತಿದ್ದೇನೆ. ಯುವಜನಾಂಗ ಹಾದಿತಪ್ಪುತ್ತಿರುವ ಈ ಸಂಘರ್ಷ ಕಾಲದಲ್ಲಿ ಕಲೆಗೆ ಉತ್ತೇಜನ ನೀಡುವುದರಿಂಡ ಸಮಾಜ ಪರಿಶುದ್ಧತೆಗೆ ಕಾರಣವಾಗುತ್ತದೆ ಎಂದರು.
ಕಲಾ ಪೋಷಕ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಹಾದಿಗಲ್ಲು ಲಕ್ಷ್ಮೀನಾರಾಯಣ ಭಟ್ಟರು ಕಲಾರಾಧನೆಯ, ಕಲಾ ಜೀವನದ ಹಾದಿಯಲ್ಲಿ ಶ್ರೀ ಶಂಭು ಹೆಗಡೆಯವರ ಅನನ್ಯತೆಯನ್ನು ವಿಮರ್ಶಿಸಿದರು. ಜನಸಾಮಾನ್ಯರನ್ನು ತಲುಪಬಹುದಾದ ಸೊಗಸಾದ ಯಕ್ಷಗಾನವನ್ನು ವಿಸ್ತರಿಸಬೇಕಾಗಿದೆ ಎಂದರು.
ನಾಟ್ಯೋತ್ಸವ ಸಮ್ಮಾನ ಪುರಸ್ಕರಿಸಿದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟರು ಮಾತನಾಡಿ ಯಕ್ಷಗಾನದ ಗಾನವೇದಕ್ಕೆ ಮೂಲ ಸಾಮವೇದ, ನೀವು ಪುರಸ್ಕರಿಸಿದ್ದು ಸಾಮವೇದಕ್ಕೆ ಸಲ್ಲುತ್ತದೆ ಎಂದರು. ಶ್ರೀ ಅನಂತ ವೈದ್ಯರು ಮಾತನಾಡಿ ಕೆರೆಮನೆಯು ವೈಶಿಷ್ಟ್ಯತೆಯಿಂದ ಕೂಡಿದ ಕಲಾಮನೆ ಎಂದರು. ಕಲಾವಿದರಾದ ಶ್ರೀ ಜಿ. ಎಂ. ಹೆಗಡೆ ತಾರಗೋಡು ಸಮ್ಮಾನ ಸ್ವೀಕರಿಸಿ ಧನ್ಯತೆ ಭಾವವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಸೂರಾಲು ದೇವಿ ಪ್ರಸಾದ ತಂತ್ರಿಯವರು ಮಾತನಾಡಿ ತೆಂಕು ಮತ್ತು ಬಡಗು ತಿಟ್ಟಿನ ವೈಶಿಷ್ಟ್ಯತೆಯೊಂದಿಗೆ “ಕೆರೆಮನೆ ತಿಟ್ಟು” ಎನ್ನುವುದು ಘರಾಣೆಯಾಗಲು ಅರ್ಹತೆ ಪಡೆದಿದೆ ಎಂದರು.
ಶ್ರೀ ರವೀಂದ್ರ ಭಟ್ ಮಾತನಾಡಿ ‘ಮಹಾನಗರದ ತಲ್ಲಣ ಸ್ಥಿತಿಯ ಭಕ್ಷಲೋಕವನ್ನು ಶುದ್ಧಿಸುವ ಶಕ್ತಿ ಯಕ್ಷಲೋಕಕ್ಕಿದೆ’ ಎಂದರು.
ಶ್ರೀ ಎಂ. ವಿ ಹೆಗಡೆಯವರು ಮಾತನಾಡಿ ಶ್ರೀ ಶಂಭು ಹೆಗಡೆಯವರ ನಯನ ಮನೋಹರವಾದ ಕೃಷ್ಣನ ಪಾತ್ರದ ಮೂಲಕ ಜನಮೆಚ್ಚುಗೆ ಪಡೆದುದ್ದನ್ನು ಸ್ಮರಿಸಿ ಯಕ್ಷಗಾನ ರಾಮಾಯಣ, ಮಹಾಭಾರತ ಗೃಂಥಗಳನ್ನು ಜನಮಾನಸದಲ್ಲಿ ಚಿರಸ್ಥಾಯಿಯಾಗಿ, ಪರಂಪರಾಗತವಾಗಿ ಮುಂದುವರೆಸಿಕೊಂಡು ಬಂದಿದೆ ಎಂದರು. ಗುಣವಂತೆಯ ಶ್ರೀಮಯ ಕಲಾಕೇಂದ್ರ ಯಕ್ಷಲೋಕದ ವಿಶ್ವವಿದ್ಯಾಲಯವಾಗಬೇಕೆಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಶಂಭು ಗೌಡ ಅಡಿಮನೆಯವರು ಮಾತನಾಡಿ ಗುಣವಂತೆ ಎಂಬ ಗ್ರಾಮೀಣ ಭಾಗವನ್ನು ಯಕ್ಷಗಾನದ ಮೂಲಕ ದೇಶವಿದೇಶಕ್ಕೆ ಪರಿಚಯಿಸಿದ ಕೀರ್ತಿ ಶ್ರೀ ಶಂಭು ಹೆಗಡೆಯವರಿಗೆ ಸಲ್ಲುತ್ತದೆ. ಇಡಗುಂಜಿ ಮೇಳದ ಪರಂಪರಾಗತ ಯಕ್ಷಗಾನ ಶೈಲಿಯನ್ನು ವಿಮರ್ಶಿಸುತ್ತಾ ಪ್ರಸ್ತುತ ಯಕ್ಷಗಾನ ಶೈಲಿಯ ಬದಲಾವಣೆಯನ್ನು ನೆನೆದು ನೊಂದುಕೊಂಡರು. ಸಾಧನೆಯ ಹಿಂದೆ ಚಿಂತನೆ, ಪ್ರಯತ್ನ ಮತ್ತು ನಿರಂತತೆ ಇರಬೇಕು ಎಂದರು. ಶ್ರೀ ಶಿವಾನಂದ ಹೆಗಡೆಯವರು ಸರ್ವರನ್ನು ವಂದಿಸಿದರು.
ಶ್ರೀ ಅರುಣ ಹೆಗಡೆ ಮತ್ತು ಶ್ರೀ ಎಲ್. ಎಂ. ಹೆಗಡೆಯವರು ನಿರೂಪಿಸಿದರು.
`