ಶಿರಸಿ: ಸಮಾಜದಲ್ಲಿ ವಿಸ್ತಾರವಾಗುತ್ತಿರುವ ಅಶಾಂತಿ, ಅಜ್ಞಾನಗಳ ನಿವಾರಣೆಯಾಗಲು ದೇವರ ಪೂಜಾ ಕ್ರಮ ಶಾಸ್ತ್ರೀಯವಾಗಿ ನಡೆಯಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿಗಳು ಹೇಳಿದರು.
ತಾಲೂಕಿನ ಕೊಳಗಿಬೀಸ್ ನಲ್ಲಿ ಸೋಮವಾರ ನಡೆದ ಹವನಾತ್ಮಕ ಮಹಾರುದ್ರದಲ್ಲಿ ಭಾಗವಹಿಸಿ, ನಂತರ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು,
ಇಂದು ಪೂಜೆ, ಪುನಸ್ಕಾರ ಮಾಡುವ ಶಾಸ್ತ್ರೀಯ ಅರ್ಹತೆ ಕಡಿಮೆ ಆಗುತ್ತಿರುವ ಸಮಾಜ ಆತಂಕದ ಸ್ಥಿತಿಯನ್ನು ಎದುರಿಸುತ್ತಿದೆ. ಅದನ್ನು ನಿವಾರಿಸಲು ದೇವರ ಪೂಜೆ ಅಗತ್ಯ ಎಂದರು.
ಸಂಸಾರದಲ್ಲಿನ ಒತ್ತಡ ನಿವಾರಿಸಿಕೊಂಡು ನೆಮ್ಮದಿಯಿಂದ ಇರಲು ಜಪತಪಾನುಷ್ಠಾನ ಮಾಡಬೇಕು. ಬಹಿರಂಗವಾಗಿ ಪೂಜೆಪುನಸ್ಕಾರದಲ್ಲಿ ತೊಡಗಿಕೊಂಡು ಆಂತರಂಗಿಕವಾಗಿ ಮುಕ್ತಿಯೆಡೆ ಸಾಗಬೇಕು ಎಂದ ಅವರು, ವರ್ತಮಾನ ಕಾಲಘಟ್ಟದಲ್ಲಿ ಧರ್ಮ ಬೋಧನೆ ಮಾಡುವ ಗುರುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ವೃದ್ಧಿಸಬೇಕಾದ ಅನಿವಾರ್ಯತೆ ಇದೆ ಎಂದು ನುಡಿದರು.
ಈ ಮೊದಲು ಅತ್ಯಂತ ಶ್ರದ್ಧೆ ಭಕ್ತಿಯಿಂದ ಶ್ರೀಗಳ ಗುರು ಭಿಕ್ಷಾ ಹಾಗೂ ಪಾದುಕಾ ಪೂಜೆ ನಡೆಯಿತು.
ವೇದಿಕೆಯಲ್ಲಿ ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತೀಗಾರ, ಪ್ರಮುಖರಾದ ಶ್ರೀಧರ ಹೆಗಡೆ, ಮಹಾಬಲೇಶ್ವರ ಹೆಗಡೆ, ಸುಬ್ರಾಯ ಹೆಗಡೆ, ನರಸಿಂಹ ಹೆಗಡೆ ಹಾಗೂ ಇತರರು ಇದ್ದರು.