ಹೊನ್ನಾವರ: ಶ್ರೀರಾಮಚಂದ್ರಾಪುರಮಠದ ವಿರುದ್ಧ ಮಾಡಲಾಗಿದ್ದ ಬ್ಲಾಕ್’ಮೇಲ್ ಪ್ರಕರಣಕ್ಕೆ ಸಂಬಂಧಿಸಿ; ಸಿಐಡಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಹೊನ್ನಾವರದ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದ್ದು, ರಾಜ್ಯ ತನಿಖಾ ಸಂಸ್ಥೆಗೆ ತೀವ್ರ ಮುಖಭಂಗವಾದಂತಾಗಿದ್ದು, ಶ್ರೀಮಠಕ್ಕೆ ಮಹತ್ವದ ಗೆಲುವಾಗಿದೆ.
ಏನಿದು ಪ್ರಕರಣ?
ದಿವಾಕರ್ ಶಾಸ್ತ್ರಿ, ಪ್ರೇಮಲತಾ ದಿವಾಕರ್, ಸಿ ಎಮ್ ಎನ್ ಶಾಸ್ತ್ರಿ ಮತ್ತು ಇತರರು ಶ್ರೀರಾಮಚಂದ್ರಾಪುರಮಠದ ಮೇಲೆ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಮಠದ ಭಕ್ತರು ನೀಡಿದ ದೂರನ್ನು ತನಿಖೆ ನಡೆಸಿದ ಸಿಐಡಿ ಸಾಕ್ಷಾಧಾರಗಳಿದ್ದರೂ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಈ ವರದಿಯನ್ನು ಭಕ್ತರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ಹಿಂದೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಪೂಜ್ಯ ಶ್ರೀಗಳ ಮೇಲೆ ಮಾಡಲಾಗಿದ್ದ ದೋಷಾರೋಪಣೆಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಶ್ರೀಗಳು ನಿರ್ದೋಷಿ ಎಂದು ಆದೇಶಿಸಿತ್ತು. ಇದೀಗ ಶ್ರೀಮಠದ ವಿರುದ್ಧ ಮಾಡಲಾಗಿದ್ದ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಿಐಡಿ ಸಲ್ಲಿಸಿದ್ದ ಬಿ ರಿಪೋರ್ಟ್ ಅವನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಮಹತ್ವದ ಆದೇಶದಿಂದ ಶ್ರೀಗಳ ಮೇಲೆ ಮಾಡಲಾದ ಅತ್ಯಾಚಾರದ ಆರೋಪ ಷಡ್ಯಂತ್ರ ಎಂಬ ವಾದಕ್ಕೆ ಜಯ ಸಿಕ್ಕಿದೆ. ಬಿ ರಿಪೋರ್ಟ್ ತಿರಸ್ಕೃತವಾಗುವುದರೊಂದಿಗೆ ಶ್ರೀರಾಮಚಂದ್ರಾಪುರಮಠದ ವಿರುದ್ಧ ಸಿ ಐ ಡಿ ಸಲ್ಲಿಸಿದ ಎರಡೂ ವರದಿಗಳೂ ತಿರಸ್ಕೃತವಾದಂತಾಗಿದೆ.