ಕುಮಟಾ- ತಾಲೂಕಿನ ಹೆರವಟ್ಟದ ಗೆಳೆಯರ ಬಳಗದ ಆಶ್ರಯದಲ್ಲಿ 7 ನೇ ವರ್ಷದ ಸೂಪರ ಸಿಕ್ಸ್ ಪಂದ್ಯಾವಳಿಯನ್ನು ದಿ| ಸದಾನಂದ ನಾಯಕ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದು. ಹೆರವಟ್ಟದ ಶಾಲಾ ಆವರಣದಲ್ಲಿ ಪಂದ್ಯಾವಳಿಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುರಸಭೆ ಅಧ್ಯಕ್ಷರಾದ ಮಧುಸೂಧನ ಶೇಟ್ ಅವರು ಮಾತನಾಡಿ ದಿ| ಸದಾನಂದ ನಾಯಕ ಓರ್ವ ಸಜ್ಜನ ವ್ಯಕ್ತಿಯಾಗಿದ್ದರು. ಅವರು ಪುರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ನಮ್ಮೆಲ್ಲರೊಂದಿಗೆ ಆತ್ಮೀಯ ಒಡನಾಟ, ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ವಿಶೇಷ ಆಮಂತ್ರಿತರಾಗಿ ಆಗಮಿಸಿರುವ ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾದ ಸೂರಜನಾಯ್ಕ ಸೋನಿ ಅವರು ಮಾತನಾಡಿ ಗೆಳೆಯರ ಬಳಗದವರು ಸತತವಾಗಿ 7 ನೇ ವರ್ಷದಲ್ಲಿ ಯಶಸ್ವಿಯಾಗಿ ಈ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಸದಾನಂದ ನಾಯಕ ಅವರ ಆಕಸ್ಮಿಕ ಅಗಲುವಿಕೆ ನಮ್ಮೆಲ್ಲರಿಗೂ ನೋವು ತಂದಿದೆ ಎಂದು ಅವರನ್ನು ಸ್ಮರಿಸಿಕೊಂಡರು. ಹಾಗೂ ಮುಂದಿನ ದಿನಗಳಲ್ಲಿ ಈ ಗೆಳೆಯರ ಬಳಗದ ವತಿಯಿಂದ ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಯವರು ಮಾತನಾಡಿ ಸಾಮಾಜಿಕ ಕಳಕಳಿಯ ಸದಾ ಹಸನ್ಮುಖಿಯಾಗಿರುವ ಸದಾನಂದ ನಾಯಕ ಅವರ ಆಕಸ್ಮಿಕ ನಿಧನ ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು. ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಜರುಗುತ್ತಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಗಳು ಉತ್ತಮ ದೈಹಿಕ ಆರೋಗ್ಯದೊಂದಿಗೆ ಮನಸ್ಸು ಸದಾ ಪ್ರಫುಲ್ಲಗೊಳ್ಳುವಂತೆ ಮಾಡುತ್ತದೆ. ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಮನೋಭಾವನೆಯನ್ನು ಬೆಳೆಸಬೇಕು. ಆಗ ಮಾತ್ರ ಅವರು ಪರಿಪೂರ್ಣರಾಗಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗುವುದರಿಂದ ಜನರಲ್ಲಿ ಕ್ರೀಡಾಪ್ರೇಮದೊಂದಿಗೆ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ತರಬೇತುದಾರರಾದ ಗುರುರಾಜ ಉಪ್ಪಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಸದಸ್ಯರಾದ ಕಾಂತರಾಜ ನಾಯ್ಕ ಅವರು ದಿ| ಸದಾನಂದ ನಾಯಕ ಅವರನ್ನು ಸ್ಮರಿಸಿಕೊಂಡು ಭಾವುಕರಾದರು.
ಈ ಸಂದರ್ಭದಲ್ಲಿ ಡಾ|| ಜಿ.ಜಿ.ಹೆಗಡೆ, ಪಿ.ಎಸ್.ಆಯ್. ಸಂಪತ್ ಕುಮಾರ. ಬಿಜೆಪಿ ಪ್ರಮುಖರಾದ ಎಂ. ಜಿ. ಭಟ್ಟ, ವೀಣಾ ನಾಯಕ, ಹರೀಶ ಹೆಗಡೆ, ಪ್ರಶಾಂತ ಶೇಟ್, ಸುಬ್ರಹ್ಮಣ್ಯ ಶೇಟ್, ಗಣೇಶ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.