ಬೆಂಗಳೂರು ಮಹಾನಗರದಿಂದ 54 ಕಿ.ಮೀ. ದೂರದಲ್ಲಿರುವ ಶಿವಗಂಗೆ, ದಕ್ಷಿಣ ಕಾಶಿ ಎಂದೇ ಖ್ಯಾತವಾಗಿದೆ. ಈ ಬೆಟ್ಟಕ್ಕೆ ನಾಲ್ಕೂ ಯುಗದ ನಂಟಿದೆ. ಕೃತಯುಗದಲ್ಲಿ ವೃಷಬಾದ್ರಿ ಎಂದೂ, ತ್ರೇತಾಯುಗದಲ್ಲಿ ಶೃಗಂದಿ ಬೆಟ್ಟವೆಂದೂ, ದ್ವಾಪರಯುಗದಲ್ಲಿ ಮಂದಾಕಿನಿ ಬೆಟ್ಟವೆಂದೂ ಕರೆಸಿಕೊಂಡಿದ್ದ ಈ ಗಿರಿ ಕಲಿಯುಗದಲ್ಲಿ ಶಿವಗಂಗೆಯಾಗಿದೆ ಎಂಬುದು ಪ್ರತೀತಿ.
ಹೆಸರೇ ಹೇಳುವಂತೆ ಇಲ್ಲಿ ಎಲ್ಲಿ ನೋಡಿದರೂ ಶಿವ ಹಾಗೂ ಗಂಗೆಯರೇ ಕಾಣುತ್ತಾರೆ. ಬೆಟ್ಟವೂ ಕೂಡ ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಗೋಚರಿಸುತ್ತದೆ. ಶಿವಗಂಗೆ ಬೆಟ್ಟವನ್ನು ಉತ್ತರದಿಂದ ನೋಡಿದರೆ ಸರ್ಪದಂತೆಯೂ, ದಕ್ಷಿಣದಿಂದ ಗಣೇಶನಂತೆಯೂ, ಪೂರ್ವದಿಂದ ನಂದಿಯಂತೆಯೂ, ಪಶ್ಚಿಮದಿಂದ ಲಿಂಗದಂತೆಯೂ ಕಾಣುತ್ತದೆ. ಈ ಬೆಟ್ಟದ ಮೇಲೆ ಅಷ್ಟಲಿಂಗ, ಅಷ್ಟಗಣಪ, ಅಷ್ಟ ವೃಷಭ, ಅಷ್ಟತೀರ್ಥಗಳಿವೆ. ಗಣಪನ ಹಾಗೂ ಶಾರದೆ ಹಾಗೂ ಶಂಕರಾಚಾರ್ಯರ ದೇವಾಲಯಗಳೂ ಇದೆ.
ಶಿವಗಂಗೆಯ ಪ್ರಸ್ತಾಪ ಪುರಾಣ ಹಾಗೂ ಗುರುಚರಿತ್ರೆಯಲ್ಲೂ ಬರುತ್ತದೆ. ಹೊಯ್ಸಳರ ಕಾಲದ ವಿಷ್ಣುವರ್ಧನ ನಂತರ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ. ಗುಡಿ ಗೋಪರ ಹಾಗೂ ಕಮಲತೀರ್ಥವೆಂಬ ಕೆರೆ ನಿರ್ಮಿಸಿದ್ದಾರೆ ಎಂದು ತಿಳಿದುಬರುತ್ತದೆ.
ಇನ್ನು ಶಿವಗಂಗೆಯಲ್ಲಿ ಸ್ವರ್ಣಾಂಭ ಸಹಿತ ಗಂಗಾಧರೇಶ್ವರ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ಧೇಶ್ವರ, ಕುಂಭೇಶ್ವರ,ಸೋಮೇಶ್ವರ, ಮುದ್ದು ವೀರೇಶ್ವರನೆಂಬ ಅಷ್ಟ ಲಿಂಗಗಳಿದ್ದರೆ, ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬತೀರ್ಥ,ಮೈತ್ಲಾ ತೀರ್ಥ, ಪಾತಾಳಗಂಗೆ, ಒಳಕಲ್ ತೀರ್ಥ, ಕಪಿಲತೀರ್ಥ ಎಂಬ ಅಷ್ಟ ತೀರ್ಥಗಳೂ ಇವೆ.
ಗಂಗಾಧರೇಶ್ವರ ಹಾಗೂ ಸ್ವರ್ಣಾಂಭ ದೇವಾಲಯಗಳು ಅತ್ಯಂತ ಪುರಾತನವಾದವು. ಈ ಕ್ಷೇತ್ರಕ್ಕೆ ಶಿವಗಂಗೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಒಂದು ಕಥೆ ಇದೆ. ಆದಿ ಶಕ್ತಿ ಹಾಗೂ ರಕ್ತಬೀಜಾಸುರನ ನಡುವೆ ಘನಘೋರ ಯುದ್ಧವಾದಾಗ ಪ್ರತಿ ತೊಟ್ಟು ರಕ್ತ ನೆಲದ ಮೇಲೆ ಬಿದ್ದ ಕೂಡಲೇ ರಕ್ತಬೀಜಾಸುರರ ಸಂತತಿ ಹೆಚ್ಚಾಗುತ್ತಿದ್ದ ಕಾರಣ ಇವರೆಲ್ಲರೊಡನೆ ಹೋರಾಡಿತ ತಾಯಿಗೆ ತುಂಬಾ ದಣಿವಾಗಿ ಬಾಯಾರಿಕೆ ಕಾಣಿಸಿಕೊಂಡಿತಂತೆ. ಆಗ ಪರಶಿವ, ಗಂಗೆಯನ್ನು ಪ್ರಾರ್ಥಿಸುವಂತೆ ತಿಳಿಸಿದನಂತೆ. ಆಗ ಶಿವೆ ಗಂಗೆಯನ್ನು ಪ್ರಾರ್ಥಿಸಲು ಗಂಗೆ ಉಕ್ಕಿದಳಂತೆ. ಈ ನೀರು ಕುಡಿದು ದಣಿವಾರಿಸಿಕೊಂಡ ದುರ್ಗೆ ರಕ್ತಬೀಜನ ಸಂಹಾರ ಮಾಡಿದಳಂತೆ. ಇಂದಿಗೂ ಈ ಬೆಟ್ಟದಲ್ಲಿ ಪಾತಾಳಗಂಗೆ ಎಂಬ ಸ್ಥಳವಿದ್ದು, ಅಲ್ಲಿ ನೀರು ಹರಿಯುತ್ತದೆ. ಈ ನೀರಿನಿಂದ ಕೈಕಾಲು ಮುಖ ತೊಳೆದರೆ ಸಕಲ ಪಾಪಗಳೂ ನಿವಾರಣೆ ಆಗುತ್ತವೆ ಎಂಬುದು ಪ್ರತೀತಿ.
ಪಾತಾಳಗಂಗೆಯ ಮೇಲ್ಭಾಗದಲ್ಲಿ ಶಂಕರಾಚಾರ್ಯರ ಗುಹೆ ಇದೆ. ಆದಿ ಶಂಕರಾಚಾರ್ಯರು ಕೆಲ ಕಾಲ ಇಲ್ಲಿ ತಪಸ್ಸು ಮಾಡಿದರು ಎಂದೂ ಹೇಳಲಾಗುತ್ತದೆ. ಇಲ್ಲಿ ಪಕ್ಕದಲ್ಲಿ ಸ್ವರ್ಣಾಂಬಾ ದೇವಿಯ ಸನ್ನಿಧಿ ಇದೆ. ರಕ್ತಬೀಜನ ಕೊಂದ ಉಗ್ರರೂಪಿ ರಕ್ತೇಶ್ವರಿಯ ವಿಗ್ರಹವಿದೆ. ಈ ಗುಡಿಯ ಬಲಭಾಗದಲ್ಲಿ ಗಂಗಾಧರೇಶ್ವರ ಸ್ವಾಮಿ ದೇವಾಲಯವಿದೆ. ಗರ್ಭಗೃಹದಲ್ಲಿ ಗಂಗಾಧರೇಶ್ವರ ಲಿಂಗವಿದೆ.
ಈ ಲಿಂಗ ಅತ್ಯಂತ ಮಹಿಮಾನ್ವಿತವಾದ್ದು ಎಂದು ಹೇಳಲಾಗುತ್ತದೆ. ದ್ವಾಪರಯುಗದಲ್ಲಿ ಜನಮೇಜಯನು ಸರ್ಪಯಾಗ ಮಾಡಿ ನಾಗ ಹತ್ಯಾ ದೋಷಕ್ಕೆ ತುತ್ತಾಗಿ ಅವನಿಗೆ ಕುಷ್ಟರೋಗ ಬರುತ್ತದೆ. ಪುಣ್ಯಕ್ಷೇತ್ರ ದರ್ಶನ ಮಾಡಿ ಪಾಪ ಪರಿಹಾರ ಮಾಡಿಕೊಳ್ಳಲು ಎಲ್ಲ ಕ್ಷೇತ್ರಕ್ಕೂ ಹೋಗುತ್ತಾನೆ. ಶಿವಗಂಗೆಗೂ ಬಂದ ಜನಮೇಜಯ ಲಿಂಗಕ್ಕೆ ಅಭಿಷೇಕ ಮಾಡಲು ತುಪ್ಪವನ್ನು ಸಮರ್ಪಿಸುತ್ತಾನೆ. ಆದರೆ ಇಲ್ಲಿನ ಲಿಂಗಕ್ಕೆ ತುಪ್ಪ ಹಚ್ಚಿದಾಗ, ಅದು ಬೆಣ್ಣೆಯಾಗಿ ಪರಿವರ್ತನೆ ಆಯಿತಂತೆ. ಬೆಣ್ಣೆ ತುಪ್ಪವಾಗುತ್ತದೆ. ಆದರೆ ತುಪ್ಪ ಬೆಣ್ಣೆ ಆಗಲು ಸಾಧ್ಯವಿಲ್ಲ. ಆದರೆ ಈ ಪವಾಡ ಶಿವಗಂಗೆಯಲ್ಲಿ ನಡೆದಿದೆ.
ಈ ಬೆಟ್ಟದಲ್ಲಿರುವ ಮತ್ತೊಂದು ಆಕರ್ಷಣೆ ಒರಳಕಲ್ಲು ತೀರ್ಥ. ಈ ನೀರಿಗೆ ಸಕಲ ರೋಗ ನಿವಾರಣೆ ಮಾಡುವ ಶಕ್ತಿ ಇದೆ ಎಂದು ಹೇಳುತ್ತಾರೆ. ಇದಲ್ಲದೆ, ನಂದಿ, ವೃಷಭ, ಮಕರಬಸವ, ಮಹಿಷ ಬಸವ, ಗಾರೆ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿಬಸವ, ಕೋಡುಗಲ್ಲು ಬಸವ ಎಂಬ ಅಷ್ಟ ಮಹಾ ವೃಷಭ ಇದೆ. ಶಿವಗಂಗೆ ಕಡಿದಾದ ಬೆಟ್ಟದ ಮೇಲಿರುವ ಕಾರಣ ಇದು ಚಾರಣ ಪ್ರಿಯರಿಗೆ ಅತ್ಯುತ್ತಮ ಗಿರಿಶಿಖರ. ಇದೇ ಬೆಟ್ಟದಲ್ಲೇ ನಾಟ್ಯರಾಣಿ ಶಾಂತಲೆ ಆತ್ಮಹತ್ಯೆ ಮಾಡಿಕೊಂಡಿದ್ದು ಇಲ್ಲಿಯೇ ಎಂದು ಹೇಳುತ್ತಾರೆ. ಈ ಸ್ಥಳಕ್ಕೆ ಶಾಂತಲಾ ಡ್ರಾಪ್ ಎಂದೇ ಕರೆಯುತ್ತಾರೆ.