ಶಿರಸಿ: ಎಚ್‍ಐವಿ ಒಂದು ಕಾಯಿಲೆ ಅಲ್ಲ, ಅದೊಂದು ಸಾಮಾಜಿಕ ಪಿಡುಗು. ಇದಕ್ಕೆ ಕೇವಲ ಚಿಕಿತ್ಸಾ ಕ್ರಮಗಳಿವೆಯೇ ಹೊರತು ಬರದಂತೆ ತಡೆಯುವ ಲಸಿಕೆಗಳಿಲ್ಲ. ಏಡ್ಸ್‍ನ್ನು ನಿಯಂತ್ರಿಸಲು ನೈತಿಕತೆಯ ಜೊತೆಗೆ ಮನಸ್ಸಿನ ಮೇಲೆ ನಿಯಂತ್ರಣದ ಅವಶ್ಯಕತೆಯೂ ಬೇಕಿದೆ. ಮನಸು ಚಂಚಲವಾಗದಂತೆ ನಾವೆಲ್ಲರೂ ಗಮನ ಹರಿಸುವ ಅವಶ್ಯಕತೆಯಿದೆ ಎಂದು ವೈದ್ಯಾಧಿಕಾರಿ ಡಾ. ಮಾಹಬ್ಲೇಶ್ವರ್ ಹೆಗಡೆ ಹೇಳಿದರು.

ಅವರು ಇಲ್ಲಿನ ಎಂ.ಎಂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪ್ರಿವೆನ್‍ಷನ್ ಬೆಂಗಳೂರು, ಎನ್ ಎಸ್ ಎಸ್ ಕೋಶ, ಜಿಲ್ಲಾ ನೋಡಲ್ ಘಟಕ ಎಂ.ಎಂ.ಕಾಲೇಜ್ ಶಿರಸಿ, ರೆಡ್ ರಿಬ್ಬನ್ ಕ್ಲಬ್, ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕಾರವಾರ ಜಿಲ್ಲೆಯ ಎನ್ ಎಸ್ ಎಸ್ ಅಧಿಕಾರಿಗಳಿಗೆ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಎಚ್‍ಐವಿ ಹರಡದಂತೆ ತಡೆಯುವ ಕ್ರಮಗಳ ಅರಿವನ್ನು ನಾವೂ ತಿಳಿದು ಇತರರಿಗೂ ತಿಳಿಸುವ ಕಾರ್ಯ ನಮ್ಮಿಂದಾಗಬೇಕು. ಎಷ್ಟೋ ದೇಶಗಳಲ್ಲಿ ಈ ಕಾಯಿಲೆಯ ಕುರಿತಾದ ಜಾಗೃತಿಯಿದೆ. ಹಾಗಾಗಿ ಅಲ್ಲೆಲ್ಲಾ ಎಚ್‍ಐವಿ ಕಾಯಿಲೆ ಪ್ರಮಾಣ ಕಡಿಮೆಯಿದೆ. ಜಾಗೃತಿಯಿಲ್ಲದ ದೇಶಗಳಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದರು.

RELATED ARTICLES  ಬನವಾಸಿಗೆ ಇದೆಂತಹ ಸ್ಥಿತಿ ಬಂತು?

ಏಡ್ಸ್ ನಾವಾಗಿಯೇ ಆಹ್ವಾನ ಮಾಡಿಕೊಳ್ಳುವ ಕಾಯಿಲೆಯಾಗಿದೆ. ಹಾಗಾಗಿ ನಮ್ಮ ಮನಸು ವಿಚಲಿತಗೊಳ್ಳದಂತೆ ನೋಡಿಕೊಳ್ಳುವ ಹೊಣೆಯೂ ಸಹ ನಮ್ಮ ಕೈಯಲ್ಲೇ ಇದೆ. ನಮಗೆ ತಿಳಿದ ಮಾಹಿತಿಗಳನ್ನು ಸಮಾಜಕ್ಕೆ ತಿಳಿಸುವ ಮೂಲಕ ಮುಂದಿನ ದಿನಗಳಲ್ಲಿ ಏಡ್ಸ್ ಮುಕ್ತ ಆರೋಗ್ಯವಂತ ಸಮಾಜ ಸೃಷ್ಟಿಯಾಗಲಿ ಎಂದು ಎಂ.ಇ.ಎಸ್ ಸಂಸ್ಥೆಯ ಸದಸ್ಯರಾದ ಲೋಕೆಶ್ ಹೆಗಡೆ ಹೇಳಿದರು.

RELATED ARTICLES  ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಮೂರ್ತಿ ತಯಾರಕ ಬಿ.ವಿ ಭಂಡಾರಿ ಇನ್ನಿಲ್ಲ.

ಎನ್.ಎಸ್.ಎಸ್. ಎಂದರೆ ಶಿಸ್ತು, ಬದ್ಧತೆ, ಸೇವೆಯನ್ನು ಸೂಚಿಸುತ್ತದೆ. ರಾಷ್ಟೀಯ ಸೇವಾ ಘಟಕದಿಂದಲೂ ಸಹ ಅರಿವು ಮೂಡಿಸುವ ಕಾರ್ಯ ಸಾಧ್ಯ ಈ ಕೈಂಕರ್ಯದಲ್ಲಿ ಎನ್.ಎಸ್.ಎಸ್ ಘಟಕವು ತೊಡಗಿಕೊಳ್ಳಲಿ ಎಂದು ಎನ್.ಎಸ್.ಎಸ್ ಸಂಯೋಜನಾಧಿಕಾರಿಯಾದ ಎಂ.ಬಿ.ದಳಪತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜು ಉಪಸಮಿತಿಯ ಅಧ್ಯಕ್ಷ ಪ್ರೊಫೆಸರ್ ಎಂ.ಎಂ.ಹೆಗಡೆ ಬಕ್ಕಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಸುಮನಾ ಹೆಗಡೆ ಉಪಸ್ಥಿತರಿದ್ದರು.