ಶಿರಸಿ: ಭಾರತೀಯ ಜನತಾ ಪಕ್ಷದಿಂದ ನವಭಾರತಕ್ಕಾಗಿ ನವಕರ್ನಾಟಕ ಎಂಬ ಧ್ಯೇಯೋದ್ದೇಶದಡಿಯಲ್ಲಿ ಜನಪರ ಶಕ್ತಿ ಎಂಬ ಕಾರ್ಯಕ್ರಮವು ನಗರದ ರೋಟರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕಾಗೇರಿ, ಪಕ್ಷದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಎಲ್ಲ ರಾಜಕಿಯ ಪಕ್ಷಗಳು ಪ್ರಣಾಳಿಕೆಗೆ ಮುಂದಾಗುತ್ತವೆ. ಇಂದು ವ್ಯಾವಹಾರಿಕವಾದ ನೆಲೆಯಲ್ಲಿ ನಾವೆಲ್ಲ ಜೊತೆ ಸೇರಿದ್ದೇವೆ. ಬಿಜೆಪಿ 150 ಕ್ಕೂ ಅಧಿಕ ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಆ ನಿಟ್ಟಿನಲ್ಲಿಯೇ ಕಳೆದ ಎರಡು ತಿಂಗಳಿನಿಂದ ರಾಜ್ಯಮಟ್ಟದಲ್ಲಿ ಸಾಕಷ್ಟು ತಯಾರಿ ನಡೆದಿದೆ ಎಂದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ವಾಣಿಜ್ಯ-ವ್ಯಾಪಾರ, ಪರಿಸರ, ಸಾಂಸ್ಕೃತಿಕ ಸೇರಿದಂತೆ ಎಲ್ಲ ವಿಭಾಗದಲ್ಲಿನ ಅಭಿಪ್ರಾಯ ಸಾರ್ವಜನಿಕರಿಂದ ದೊರೆಯಬೇಕು. ದೊರೆತ ಎಲ್ಲ ಅಭಿಪ್ರಾಯವನ್ನು ಕ್ರೋಢಿಕರಿಸಿ ಅದರ ಆಧಾರದ ಮೇಲೆ ಚುಣಾವಣಾ ಪ್ರಣಾಳಿಕೆ ತಯಾರಿಸಲಾಗುತ್ತದೆ. ನಗರ ಮತ್ತು ಗ್ರಾಮೀಣ ಜನಜೀವನಕ್ಕೆ ಬೇಕಾಗಿರುವ ಅನುಕೂಲತೆಗಳಿಗೆ ಸಂಬಂಧಿಸಿ ಕ್ಷೇತ್ರದ ಜನರು ಅಭಿಪ್ರಾಯವನ್ನು ನೀಡಬೇಕು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಮಾತನಾಡಿ, ಈ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ. ಸಾರ್ವಜನಿಕರ ಕಲ್ಪನೆಗಳು ಪ್ರಜಾಪ್ರತಿನಿಧಿಗಳಿಗೆ ದೊರಕದೇ ಇರಬಹುದು. ಅಂತಹ ಕಾರಣಕ್ಕಾಗಿ ಬಿಜೆಪಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಳಮಟ್ಟದಿಂದ ಅಭಿಪ್ರಾಯ ಸಂಗ್ರಹಣೆ ಮತ್ತು ಅದರ ಅನುಷ್ಠಾನಕ್ಕೆ ನಾವು ನೂರಕ್ಕೆ ನೂರರಷ್ಟು ತರಲಿದ್ದೇವೆ. ಹಾಗಾಗಿ ಜನತೆ ನಮ್ಮ ಜೊತೆ ಕೈಜೋಡಿಸಬೇಕು ಎಂದರು.
ಪಶುವೈದ್ಯ ಪಿ ಎಸ್ ಹೆಗಡೆ ಮಾತನಾಡಿ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಕೊಂಡುವಾಡದ ನಿರ್ಮಾಣ ಆಗಬೇಕು. ಗೋಮಾಳದಲ್ಲಿ ಮೇವಿನ ಮರವನ್ನು ಬೆಳೆಸಬೇಕು. ದೇಶಿ ತಳಿಗಳ ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಪಶುವೈದ್ಯ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಮತ್ತು ಸಲಕರಣೆಗಳು ಇರುವಂತಾಗಬೇಕು. ಹಾಲಿನ ಖರೀದಿ ಹಾಗು ಮಾರಾಟದ ದರದಲ್ಲಿ ನಿಶ್ಚಿತವಾದ ಬೆಲೆ ಇರಬೇಕು ಎಂದರು.
ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ರೈತರಿಗೆ ಹಸು ಖರೀದಿಗಾಗಿ ಕೃಷಿ ಸಾಲ ದೊರೆಯುವಂತೆ ಹಾಗು ಹಾಲು ಉತ್ಪಾದಕ ಸಂಘಗಳ ನೌಕರ ಗೌರವ ಧನವನ್ನು ಸರ್ಕಾರ ಹೆಚ್ಚಿಸಬೇಕು ಎಂದರು.
ರೋಟರಿ ಕ್ಲಬ್ ಶಿರಸಿ ಅಧ್ಯಕ್ಷ ಪ್ರವೀಣ ಕಾಮತ್ ಮಾತನಾಡಿ, ನಗರದಲ್ಲಿ ಶೌಚಾಲಯಗಳು ಸುವ್ಯವಸ್ಥಿತವಾಗಿರಬೇಕು. ಜೊತೆಗೆ ಟ್ರಾಫಿಕ್ ಪೋಲೀಸ್ ಸ್ಟೇಷನ್ ಆಗುವಂತಾಗಬೇಕೆಂದರು.
ಲಯನ್ಸ್ ಗೌರವ ಕಾರ್ಯದರ್ಶಿ ಎಮ್ ಎಮ್ ಭಟ್ಟ ಮಾತನಾಡಿ, ನಾಗರಿಕ ಪರೀಕ್ಷೆಗೆ ತಯಾರಿ ನೀಡುವ ಕೇಂದ್ರಗಳಿಗೆ ಅನುದಾನ ದೊರೆಯುವಂತೆ ಮಾಡಬೇಕು ಜೊತೆಗೆ ಅಂಗವಿಕಲರಿಗೆ ಆದ್ಯತೆಯ ಮೇಲೆ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಗಜಾನನ ಸಕಲಾತಿ ಮಾತನಾಡಿ, ಖಾಯಂ ಆಗಿ ಇರುವಂತಹ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡುವಂತಾಗಬೇಕು ಎಂದರು
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಸಳೆ, ಆರ್ ಡಿ ಹೆಗಡೆ ಜಾನ್ಮನೆ, ತಾ ಪಂ ಉಪಾಧ್ಯಕ್ಷ ಚಂದ್ರು ಎಸಳೆ, ನಗರ ಮಂಡಲ ಅಧ್ಯಕ್ಷ ಗಣಪತಿ ನಾಯ್ಕ, ಜಿ ಕೆ ಹೆಗಡೆ, ಆರ್ ವಿ ಹೆಗಡೆ ಚಿಪಗಿ ಇನ್ನಿತರರು ಇದ್ದರು.