ಕಾರವಾರ : ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಬಿಜೆಪಿಯೇ ಆಯ್ಕೆ ಮಾಡುತ್ತದೆ ಹೊರತು, ಈ ಆಯ್ಕೆಯಲ್ಲಿ ಸಂಘ ಪರಿವಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ಉತ್ತರಕನ್ನಡ ಬಿಜೆಪಿಯ ಉಸ್ತುವಾರಿ ವಿಕ್ರಮಾರ್ಜುನ ಹೆಗ್ಗಡೆ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಾರ್ಜುನ ಹೆಗ್ಗಡೆ, ಪಕ್ಷವು ಅಭ್ಯರ್ಥಿಗಳ ಹೆಸರನ್ನು ಈವರೆಗೆ ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ನಿರ್ಣಯವೇ ಅಂತಿಮ. ಅಭ್ಯರ್ಥಿಗಳ ಆಯ್ಕೆಯನ್ನು ಕೇಂದ್ರಿಯ ಸಂಸದೀಯ ಮಂಡಳಿಯೇ ನಿರ್ಧಾರ ಮಾಡಲಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಫೆ.4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಪರಿವರ್ತನಾ Rally ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹತ್ತು ಸಾವಿರಕ್ಕಿಂತ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಇನ್ನು ತಾಲೂಕಿನಲ್ಲಿ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಕೆ.ಜಿ.ನಾಯ್ಕ, ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು. ಅಶಿಸ್ತನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ಇದು ಇತರ ತಾಲೂಕುಗಳಿಗೂ ಸಹ ಹರಡಬಹುದು. ಆದ್ದರಿಂದ ಆಶಿಸ್ತನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ವಕ್ತಾರ ರಾಜೇಶ ನಾಯಕ, ಮಾಜಿ ಶಾಸಕ ಗಂಗಾಧರ ಭಟ್ ಉಪಸ್ಥಿತರಿದ್ದರು.