ಶಿರಸಿ : ಫೆ 27 ರಿಂದ ಮಾರ್ಚ್ 7 ರವರೆಗೆ ನಡೆಯಲಿರುವ ರಾಜ್ಯದ ಪ್ರಸಿದ್ಧ ಶಿರಸಿ ಜಾತ್ರೆಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ವಿವಿಧ ಇಲಾಖೆಗಳಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದಾರೆ.
ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ನಡೆದ ಜಾತ್ರಾ ಪೂರ್ವ ತಯಾರಿ ಸಭೆಯಲ್ಲಿ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಸಿದ ಅವರು ನೀಲ ನಕ್ಷೆ ಇಲ್ಲದೆ ಶಿರಸಿ ನಗರಸಭೆಯವರು ಜಾತ್ರೆ ನಡೆಸಲು ಮುಂದಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕೆಳ ಹಂತದ ಅಧಿಕಾರಿಗಳ ಕಾರ್ಯವೈಖರಿ ಗರಂ ಆದ ಜಿಲ್ಲಾಧಿಕಾರಿಗಳು ಇನ್ನು ಮೂರುದಿನಗಳ ಒಳಗಾಗಿ ಜಾತ್ರೆಯ ಆಕ್ಷನ್ ಪ್ಲಾನ್ ಸಿದ್ಧಪಡಿಸಿ, ನೀಲ ನಕ್ಷೆ ತಯಾರಿಸಿ ಕಳುಹಿಸಬೇಕು ಎಂದರು.
ಇದೇ ವೇಳೆ ಜಾತ್ರೆ ಸಂದರ್ಭದಲ್ಲಿ ಪಾಲಿಸಬೇಕಾದ ಹಲವು ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮುಖ್ಯವಾಗಿ ಜಾತ್ರೆ ವೇಳೆಯಲ್ಲಿಯೇ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುವ ಕಾರಣ ಜಾತ್ರೆಯಲ್ಲಿ ಅತಿ ಕಡಿಮೆ ಧ್ವನಿವರ್ಧಕ ಬಳಸಬೇಕು. ಮಾರಿಕಾಂಬಾ ದೇವಸ್ಥಾನ ಹಾಗೂ ತುರ್ತು ಘಟಕದ ಶಬ್ದಗಳು ಬಿಟ್ಟು ಬೇರೆ ಯಾವುದೇ ಧ್ವನಿರ್ಧಕ, ಡಿಜೆಗಳು ಇರಬಾರದು ಎಂದು ಸೂಚನೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಇನ್ನು ಜಾತ್ರೆ ಜಾಗ ಹರಾಜು ಕುರಿತಂತೆ ಈವರೆಗೆ ನಡೆದುಕೊಂಡ ಪದ್ದತಿಯನ್ನು ಬದಲಾಯಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿಯೇ ಜಾಗವನ್ನು ಹರಾಜು ಹಾಕಬೇಡಿ. ಬಾಕ್ಸ್ ಮೂಲಕ ಹರಾಜು ಹಾಕಿ, ಯಾರು ಹೆಚ್ಚಿನ ಮೊತ್ತ ಬರೆಯುತ್ತಾರೋ ಅವರಿಗೆ ಅಂಗಡಿ ಹಾಕಲು ಅವಕಾಶ ಕೊಡಿ ಎಂದರು.
ಇನ್ನು ವಿಐಪಿ, ಫ್ರೀ ಪಾಸ್ ಗಳನ್ನು ಒಂದು ಸಂಖ್ಯೆಗೆ ನಿಗದಿಗೊಳಿಸಬೇಕು.ಒಮ್ಮೆ ದೇವಿಯ ದರ್ಶನ ಮಾಡಿದ ಮೇಲೆ ಅದನ್ನು ಹರಿದು ಹಾಕಬೇಕು. ವಿಐಪಿ, ಫ್ರೀ ಪಾಸ್ ಪಡೆದವರಿಂದ ಸರತಿ ಸಾಲಿನಲ್ಲಿ ನಿಲ್ಲುವ ಬೇರೆ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಜಾತ್ರಾ ಸ್ಥಳದಲ್ಲಿ ವಿಶೇಷ ಅಗ್ನಿಶಾಮಕ ವಾಹನ, ತುರ್ತು ವೈದ್ಯಕೀಯ ವ್ಯವಸ್ಥೆ, ನಿತ್ಯ ಸ್ವಚ್ಚತಾ ಕಾರ್ಯಕ್ರಮ ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಸಹಾಯಕ ಆಯುಕ್ತ ರಾಜು ಮೊಗವೀರ ಉಪಸ್ಥಿತರಿದ್ದರು.