ದಾಂಡೇಲಿ: ಪಕ್ಷಿಪ್ರಿಯರಲ್ಲಿ ‘ಕಾಡಿನ ರೈತ’ ಎಂದೇ ಹೆಸರಾದ ಹಾರ್ನ್‌ಬಿಲ್ ಹಕ್ಕಿಯ (ಮಂಗಟ್ಟೆ) ಹಬ್ಬ, ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಫೆ.2ರಿಂದ 4ರವರೆಗೆ ನಡೆಯಲಿದೆ. ಇದು ರಾಜ್ಯದಲ್ಲಿ ಹಮ್ಮಿಕೊಂಡ ಮೊದಲ ಕಾರ್ಯಕ್ರಮ.
ಅಳಿವಿನ ಅಂಚಿನಲ್ಲಿರುವ ಇವುಗಳ ಚಲನವಲನಗಳನ್ನು ವೀಕ್ಷಿಸುವುದು, ಆಹಾರ ಪದ್ಧತಿ, ಸಂತಾನೋತ್ಪತ್ತಿಯ ಮಾಹಿತಿ ಪಡೆಯುವುದು, ಜೀವ ಸಂಕುಲದಲ್ಲಿ ಅವುಗಳಿಗೆ ಇರುವ ಮಹತ್ವದ ಕುರಿತು ಅರಿವು ಮೂಡಿಸಲು ಈ ಹಬ್ಬವನ್ನು ಆಚರಿಸಲಾಗುತ್ತಿದೆ.
1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಮೊದಲ ಅನುಸೂಚಿಯಲ್ಲೇ ಈ ಪಕ್ಷಿಗಳನ್ನು ಸೇರಿಸಲಾಗಿದೆ. ಪ್ರಪಂಚದಾದ್ಯಂತ ಇರುವ 54 ಪ್ರಬೇಧಗಳ ಪೈಕಿ ನಮ್ಮ ದೇಶದಲ್ಲಿ ಒಂಬತ್ತು ರೀತಿಯ ಹಾರ್ನ್‌ಬಿಲ್ ಪಕ್ಷಿಗಳಿವೆ ಎನ್ನುತ್ತಾರೆ ಜಿಲ್ಲಾ ಅರಣ್ಯಾಧಿಕಾರಿ ಡಾ.ಎಸ್.ರಮೇಶ್.
ದಾಂಡೇಲಿ ಸುತ್ತಮುತ್ತ ಇರುವ ದಟ್ಟವಾದ ಅರಣ್ಯದಲ್ಲಿ ಹೇರಳವಾಗಿ ಸಿಗುವ ಹಣ್ಣು, ತಂಪಾದ ವಾತಾವರಣ, ಕಾಳಿ ನದಿಯ ನೀರು ಹಕ್ಕಿಗಳ ವಾಸಕ್ಕೆ ಪ್ರಶಸ್ತ ಸ್ಥಳವಾಗಿದೆ. ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 52 ಚದರ ಕಿ.ಮೀ ವ್ಯಾಪ್ತಿ ಪ್ರದೇಶವನ್ನು 2008ರಿಂದ ‘ಹಾರ್ನ್‌ಬಿಲ್ ಸಂರಕ್ಷಿತ ವಲಯ’ ಎಂದೂ ಗುರುತಿಸಲಾಗಿದೆ.
ಜೀವಿತಾವಧಿಯಲ್ಲಿ ಒಂದೇ ಸಂಗಾತಿಯೊಂದಿಗೆ ಇರುವುದು ಮತ್ತು ಗೂಡು ಕಟ್ಟುವ ವಿಧಾನವೇ ಇವುಗಳ ವೈಶಿಷ್ಟ್ಯ. ಮೊಟ್ಟೆಗಳನ್ನಿಡುವ ಸಂದರ್ಭದಲ್ಲಿ ಹೆಣ್ಣು ಹಕ್ಕಿ ಎತ್ತರದ ಮರದ ಪೊಟರೆಯೊಳಗೆ ಸೇರಿಕೊಳ್ಳುತ್ತದೆ.
ತನ್ನ ಕೊಕ್ಕನ್ನು ಹೊರ ತೂರುವಷ್ಟು ಮಾತ್ರ ಜಾಗ ಬಿಟ್ಟು ಒಳಗಿಂದ ತನ್ನ ಹಿಕ್ಕೆಯಿಂದಲೇ ಮುಚ್ಚುತ್ತದೆ. ಹೊರ ಭಾಗವನ್ನು ಗಂಡು ಹಕ್ಕಿ ಮುಚ್ಚುತ್ತದೆ ಎನ್ನುತ್ತಾರೆ ದಶಕದಿಂದ ಈ ಹಕ್ಕಿಗಳ ಜೀವನ ಶೈಲಿ ಕುರಿತು ಅಧ್ಯಯನ ಹಾಗೂ ಅವುಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿರುವ ದಾಂಡೇಲಿಯ ಜಂಗಲ್ ಲಾಡ್ಜ್ ರೆಸಾರ್ಟ್‌ನ ಶಶಿಧರ.
‘ಸುಮಾರು ಎರಡು ತಿಂಗಳು, ಗಂಡು ಹಕ್ಕಿ ಪೂರೈಸಿದ ಆಹಾರವನ್ನೇ ಸೇವಿಸುವ ಅದು ಆ ಬಳಿಕ ಹೊರಬಂದು ಪೊಟರೆಯನ್ನು ಪುನಃ ಮುಚ್ಚುತ್ತದೆ. ಮೂರು ತಿಂಗಳ ಬಳಿಕ ಮರಿಗಳ ರೆಕ್ಕೆ ಬಲಿಯುತ್ತದೆ. ಈ ಅವಧಿಯಲ್ಲಿ ಒಂದು ವೇಳೆ ಗಂಡು ಹಕ್ಕಿ ಸತ್ತರೆ ಅದರ ಇಡೀ ಸಂಸಾರ ಆಹಾರವಿಲ್ಲದೇ ಅಂತ್ಯವಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಹಾರ್ನ್‌ಬಿಲ್ ಪಕ್ಷಿಗಳು ತಮ್ಮ ಗೂಡಿನಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಡುತ್ತವೆ. ಆ ಪ್ರದೇಶದಲ್ಲಿ ಹಿಕ್ಕೆ ಹಾಕಿದಾಗ ಹಣ್ಣಿನ ಬೀಜಗಳು ಪಸರಿಸುತ್ತವೆ. ಇದರಿಂದ ಸಹಜವಾಗಿ ಅರಣ್ಯೀಕರಣವಾಗುತ್ತದೆ. ಆದ್ದರಿಂದ ಇವುಗಳಿಗೆ ‘ಕಾಡಿನ ರೈತ’ ಎಂದು ಹೆಸರು ಬಂದಿದೆ