ಕಾರವಾರ: ಇಲ್ಲಿನ ಕೈಗಾದಲ್ಲಿರುವ ಅಣುವಿದ್ಯುತ್‌ ಯೋಜನೆ ವಿದ್ಯುತ್‌ ಉತ್ಪಾದನೆ ಆರಂಭಿಸಿ 20 ವರ್ಷಗಳು ಮುಗಿದಿವೆ. ಆದರೆ ಅಣುತ್ಯಾಜ್ಯ ಹೊತ್ತು ಸಾಗುವ ಅತೀ ಉದ್ದದ ವಾಹನಗಳಿಗೆ ಅತ್ಯಂತ ಕಿರಿದಾದ ರಸ್ತೆಗಳ ಕಾರಣ ತಿರುವಿನಲ್ಲಿ ಅಪಘಾತಗಳಾಗುವ ಪ್ರಕರಣ ಮುಂದುವರಿದಿದೆ.

ಕಾರವಾರದಿಂದ ಕಡವಾಡ, ಸಿದ್ದರ, ಕೆರವಡಿ, ಮಲ್ಲಾಪುರ ಮಾರ್ಗವಾಗಿ ಅತೀ ಉದ್ದನೆಯ ವಾಹನ ಸಾಗುವಾಗ ಉರುಳಿ ಬೀಳುತ್ತಿವೆ. ಕಾರಣ ಈ ರಸ್ತೆ ಕಿರಿದಾಗಿರುವುದು ಹಾಗೂ ಅತ್ಯಂತ ಹೆಚ್ಚು ತಿರುವುಗಳನ್ನು ಹೊಂದಿರುವುದಾಗಿದೆ. ರಸ್ತೆಯಲ್ಲಿ ಕೈಗಾಕ್ಕೆ ಸಾಗುವ ವಾಹನಗಳು ಉರುಳಿ ಬೀಳುವುದು ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಶನ್‌ ಆಫ್‌ ಇಂಡಿಯಾದ ಆಡಳಿತ ವಿಭಾಗದ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಕಳೆದ ಮೂರ್‍ನಾಲ್ಕು ತಿಂಗಳಲ್ಲಿ ಇಂಥ ಬೃಹತ್‌ ವಾಹನಗಳು ಎರಡು ಸಲ
ಅಪಘಾತಗಳನ್ನು ಕಂಡಿವೆ.

ಕೈಗಾ ಮತ್ತು ಕಾರವಾರ ನಡುವಿನ 80 ಕೀ.ಮೀ ಉದ್ದದ ರಸ್ತೆಯು ಗುಡ್ಡ ಹಾಗೂ ಅರಣ್ಯ ಪ್ರದೇಶದಿಂದ ಕೂಡಿದೆ. ಕಾರವಾರದಿಂದ
ಮಲ್ಲಾಪುರತನಕ ಹತ್ತು ಗ್ರಾಮಗಳು ಬಂದರೆ, ಮಲ್ಲಾಪುರದಿಂದ ಕೈಗಾವರೆಗೆ ಸಹ್ಯಾದ್ರಿ ಸೆರಗಿನಲ್ಲಿ ರಸ್ತೆ ಹಾದು ಹೋಗುತ್ತದೆ. ರಸ್ತೆ ಕಿರಿದಾಗಿದ್ದು, ತಿರುವುಗಳಿಂದ ಕೂಡಿದೆ. ಕೈಗಾದಿಂದ ಬಾರೆ, ಕಳಚೆ ಮಾರ್ಗವಾಗಿ ಇಡಗುಂದಿ ಹಾಗೂ ಯಲ್ಲಾಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಸೇರುವ ಮತ್ತೂಂದು ರಸ್ತೆ ಸಹ ಒಂದೇ ವಾಹನ ಸಾಗುವಷ್ಟು ಅಗಲದ ರಾಜ್ಯ ಹೆದ್ದಾರಿಯಾಗಿದೆ. ಕೈಗಾ -ಇಡಗುಂದಿ ಮಧ್ಯದ ರಸ್ತೆ ಅಗಲೀಕರಣ ಮಾಡಿದರೆ ಕೈಗಾಕ್ಕೆ ಬೃಹತ್‌ ವಾಹನಗಳು ಬರುವ ಸಮಸ್ಯೆಗೆ ಬಹುದೊಡ್ಡ ರಿಲೀಫ್‌ ಸಿಗಲಿದೆ. ಅಲ್ಲದೇ ಕಾರವಾರ ಮಾರ್ಗವಾಗಿ ಸುತ್ತಿ ಬಳಸಿ ಕೈಗಾ ತಲುಪುವ ದೂರವೂ ಕಡಿಮೆಯಾಗಲಿದೆ. ಯೋಜನಾ ವೆಚ್ಚವೂ ತಗ್ಗಲಿದೆ.

RELATED ARTICLES  ಮಾನಸಿಕ ಅಸ್ವಸ್ಥನಿಂದ ಸಾರ್ವಜನಿಕರ ಮೇಲೆ ಹಲ್ಲೆ

ಆರಂಭದಲ್ಲೇ ಯೋಜನೆ ಇತ್ತು: ಕೈಗಾ ಅಣುಸ್ಥಾವರ ಯೋಜನೆ 1986ರಲ್ಲಿ ಆರಂಭವಾದಾಗಲೇ ಯೋಜನೆಗೆ ಸಂಬಂಧಿಸಿದ ಬೃಹತ್‌ ವಾಹನಗಳ ಒಡಾಟಕ್ಕೆ ಅನುಕೂಲವಾಗುವಂತೆ ರಸ್ತೆ ಅಗಲೀಕರಣ ಮಾಡುವ ಯೋಜನೆ ಇತ್ತು. ಅಲ್ಲದೇ ಅಕ್ಕಪಕ್ಕದ ಗ್ರಾಮದ ಜನರಿಗೆ ಅನಾನುಕೂಲ ತಪ್ಪಿಸಲು ಎನ್‌ಪಿಸಿಐಎಲ್‌ನ ಅಧಿಕಾರಿಗಳು ರಸ್ತೆಯ ವಿಸ್ತರಣೆಗಾಗಿ 90ರ ದಶಕದ ಆರಂಭದಲ್ಲಿಯೇ ಸರ್ವೇ ನಡೆಸಿದ್ದರು. ಸಮೀಕ್ಷೆ ಮೂಲಕ ಕೈಗಾ-ಕಾರವಾರ ರಸ್ತೆಯ ಭೂಸ್ವಾಧೀನಕ್ಕೆ ಮತ್ತು ರಸ್ತೆ ವಿಸ್ತರಣೆಗಾಗಿ ಸುಮಾರು 42 ಕೋಟಿ ರೂ. ಅಂದಾಜಿಸಲಾಗಿತ್ತು. ಆದರೆ ಈ ರಸ್ತೆ ವಿಸ್ತರಣೆಗಾಗಿ ಜಮೀನು ಕಳೆದುಕೊಳ್ಳುವ ಗ್ರಾಮಸ್ಥರು, ಕೈಗಾ ಯೋಜನೆಯಲ್ಲಿ ಭೂಮಿ
ಕಳೆದುಕೊಂಡ ನಿರಾಶ್ರಿತರಿಗೆ ನೀಡಿದಷ್ಟೇ ಪರಿಹಾರ ನೀಡಬೇಕು. ಕೈಗಾದಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿದಾಗ ರಸ್ತೆ ಅಗಲೀಕರಣದ ಯೋಜನೆಯೇ ಸ್ಥಗಿತವಾಯಿತು.

ಯೋಜನಾ ವೆಚ್ಚ ಮೂರು ಪಟ್ಟು ಹೆಚ್ಚಳ:
ಕಾರವಾರ ಕೈಗಾ ಕೊಪ್ಪಳ ಮಧ್ಯೆ ರಸ್ತೆ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿದರೂ ಕಾರವಾರದಿಂದ ಇಡಗುಂದಿ ತನಕ ರಸ್ತೆ ದ್ವಿಪಥ
ಅಗಲೀಕರಣ ಮತ್ತು ಅಭಿವೃದ್ಧಿಗೆ 120 ರಿಂದ 150 ಕೋಟಿ ರೂ. ಬೇಕು. ಈಗ ಪ್ರಸ್ತುತ ಇರುವ ರಸ್ತೆ ಕೆಲವು ಕಡೆ 7 ಮೀ.ನಿಂದ 9 ಮೀಟರ್‌ ಮಾತ್ರ ಅಗಲವಿದೆ. ಇದನ್ನು ಕನಿಷ್ಠ 30 ರಿಂದ 45 ಮೀಟರ್‌ಗೆ ಅಗಲೀಕರಣ ಮಾಡಿದರೂ ಕೋಟಿ ಕೋಟಿ ರೂ. ಬೇಕು. ಮೇಲಾಗಿ ಪರಿಸರ ಮಂತ್ರಾಲಯ ಈಗಾಗಲೇ ಕೈಗಾ ಇಡಗುಂದಿ ಮಧ್ಯದ ರಸ್ತೆ ಅಗಲೀಕರಣಕ್ಕೆ ಸಮ್ಮಿತಿ ನೀಡಿದೆ ಎಂಬ ಮಾಹಿತಿ ಸಹ ಬಂದಿದೆ. ಇದನ್ನು ಕೈಗಾ ಅಣುಸ್ಥಾವರದ ಸುರಕ್ಷತೆ ಮತ್ತು ಅಲ್ಲಿನ ಜನರ ಆರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ
ಸ್ಥಳಾಂತರದ ದೃಷ್ಟಿಯಿಂದ ನೀಡಲಾಗಿದೆ. ಅಲ್ಲದೇ ಮಲ್ಲಾಪುರದಿಂದ ಕಾರವಾರದ ತನಕ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಇದನ್ನು ಅಭಿವೃದ್ಧಿ ಪಡಿಸಲು 70 ಕೋಟಿ ರೂ.ಯೋಜನೆ ರಾಜ್ಯ ಸರ್ಕಾರದ ಮುಂದಿತ್ತು. ಕಾರವಾರ ಶೇಜವಾಡದಿಂದ ಕಡವಾಡ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ರಸ್ತೆ ಅಗಲೀಕರಣಕ್ಕೆ ಅಡಿಗಲ್ಲು ಹಾಕಲಾಗಿದೆ.
ಈ ರಸ್ತೆಯನ್ನು ಮಲ್ಲಾಪುರತನಕ ವಿಸ್ತರಿಸುವ ಯೋಜನೆ ಇದೆ. ಇದು ಕಾರವಾರ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿ ಅನುಷ್ಠಾನವಾದರೆ ರಸ್ತೆ ಪಕ್ಕದ ನಿವಾಸಿಗಳು ಭೂಮಿ ಮನೆ ಕಳೆದುಕೊಂಡರೆ ಸೂಕ್ತ ಪರಿಹಾರ ಸಹ ಸಿಗಲಿದೆ.

RELATED ARTICLES  ನಾಟಿ ವೈದ್ಯ ಹನುಮಂತ ಗೌಡರಿಗೆ ಸನ್ಮಾನ.

ಹೊಸ ಪ್ರಸ್ತಾವನೆ
ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯದ ಐದು ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಕಾರವಾರ- ಕೈಗಾ- ಹಾವೇರಿ- ಗದಗ- ಗಜೇಂದ್ರಗಡ- ಕೊಪ್ಪಳ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಲು ನಿರ್ಧರಿಸಿದೆ. ಈ ಹೆದ್ದಾರಿ ಯೋಜನೆ ಜಾರಿಯಾದರೆ ಹಲವು ಉಪಯೋಗಗಳು ಸಿಗಲಿವೆ. ರಸ್ತೆ ಯೋಜನೆ ಕಾರ್ಯಗತವಾಗುವುದರಿಂದ ಎನ್‌ಪಿಸಿಐಎಲ್‌ನ ಇಂಧನ ಮತ್ತು ಯುರೇನಿಯಂ ಸಾಗಾಟ ಮಾಡುವ ವಾಹನಗಳು ಯಲ್ಲಾಪುರ ಸಮೀಪದ ಇಡಗುಂದಿ ಮೂಲಕ ಕೈಗಾಕ್ಕೆ ನೇರವಾಗಿ ಪ್ರವೇಶಿಸಬಹುದು. ಇದರಿಂದ ಕಾರವಾರ ಮಾರ್ಗದ ಮೂಲಕ ಸಿದ್ದರ ಕೆರವಡಿ ಮಲ್ಲಾಪುರ ಪ್ರವೇಶಿಸದೆ ನೇರವಾಗಿ ಇಡಗುಂದಿ ಮೂಲಕ ಕೈಗಾಕ್ಕೆ ಸಾಗುವುದರಿಂದ ಸುಮಾರು 120 ಕೀ.ಮಿ ದೂರ ಕಡಿಮೆಯಾಗುತ್ತದೆ. ಹೆದ್ದಾರಿ ನಿರ್ಮಾಣದಿಂದ
ಉತ್ತರ ಕರ್ನಾಟಕದ ಭಾಗದಿಂದ ಕಾರವಾರ ಬಂದರು ಮೂಲಕ ಸರಕು ಸಾಗಾಟ ವ್ಯವಹಾರಕ್ಕೆ ಅನುಕೂಲವಾಗಲಿದೆ. ಕಾರವಾರ-ಕೈಗಾ- ಕೊಪ್ಪಳ ರಸ್ತೆಯನ್ನು ಮೇಲ್ದರ್ಜೆಗೆರಿಸಲು ಸ್ಥಳೀಯರು ಸಹ ಆಗ್ರಹಿಸುತ್ತಿದ್ದು, ಹೊಸ ವಾಣಿಜ್ಯ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಸಿಗಲಿದೆ.