ರಾಜ್ಯ ಸರ್ಕಾರ ತನ್ನ ಸಾಧನೆಗಳನ್ನು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಪ್ರಚಾರ ಮಾಡಲು ಬೃಹತ್ ಎಲ್ ಇಡಿ ಪರದೆಗಳನ್ನೊಳಗೊಂಡ 150 ವಾಹನಗಳನ್ನು ಬಳಸಿಕೊಳ್ಳುತ್ತಿದೆ. ವಾಹನಗಳ ಗುತ್ತಿಗೆಯನ್ನು ಮುಂಬೈ ಮೂಲದ ವಿಡೀಯೊ ವಾಲ್ ಇಂಡಿಯಾ ಪ್ರೈವೆಟ್ ಕಂಪನಿಗೆ ನೀಡಿದೆ.
ಆದರೆ ಈ ಪ್ರಚಾರದ ವಾಹನಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳ ನೋಂದಣಿ ಸಂಖ್ಯೆಯನ್ನು ಹೊಂದಿವೆ. ವಾಹನಗಳು ಉತ್ತರ ಪ್ರದೇಶ ಬುಲಂದ್ ಶೆಹರ್ ಡಿಪೋಗೆ ಸೇರಿವೆ. ಉತ್ತರ ಪ್ರದೇಶ ಸರ್ಕಾರ ಗುಜರಿಗೆ ಹಾಕಿದ ವಾಹನಗಳನ್ನು ರಾಜ್ಯ ಸರ್ಕಾರ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ರಾಜ್ಯ ಸರ್ಕಾರ ಪ್ರಚಾರ ವಾಹನಗಳ ಗುತ್ತಿಗೆಯನ್ನು ಹೊರ ರಾಜ್ಯಗಳ ಕಂಪನಿಗೆ ನೀಡಿರುದನ್ನು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ರಾಜೇಶ ನಾಯಕ ಕಟುವಾಗಿ ಟೀಕಿಸಿದರು.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವೀರಾವೇಶದಿಂದ ಮಾತನಾಡುವ ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಆ ರಾಜ್ಯದ ವಾಹನಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ಆಡಳಿತ ಎಷ್ಟು ಉತ್ತಮವಾಗಿದೆ ಎಂದು ಇದರಿಂದಲೇ ತಿಳಿಯುತ್ತೆ ಎಂದು ವ್ಯಂಗ್ಯವಾಡಿದರು.