ಕಾರವಾರ: ‘ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಗಳು ರಾಜ್ಯದಲ್ಲಿ ಮೇಲಿಂದ ಮೇಲೆ ಆಗುತ್ತಿದೆ. ಆದರೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
‘ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳಿಗೆ ತಡೆಯಿಲ್ಲದೇ ಮುಂದುವರಿದಿದೆ. ಇದು ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೆಂಗಳೂರಿನ ಜೆ.ಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಪ್ಪ ಗಾರ್ಡನ್ ಬಳಿ ಸಂತೋಷ್ ಎನ್ನುವ ಯುವಕನನ್ನು ದುಷ್ಕರ್ಮಿಗಳು ಇರಿದು ಕೊಲೆಗೈದಿದ್ದಾರೆ. ಕಳೆದ 3 ವರ್ಷಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯ ಸರಣಿಯಲ್ಲಿ ಇದು 24ನೇಯದು’ ಎಂದು ತಿಳಿಸಿದರು.
‘ಕಳೆದ ವರ್ಷ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಲಾಯಿತು. ಎನ್‌ಐಎಯು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಐವರನ್ನು ಈ ಪ್ರಕರಣದಲ್ಲಿ ಬಂಧಿಸಲಾಯಿತು. ಮಂಗಳೂರಿನ ಬಿ.ಸಿ. ರೋಡಿನಲ್ಲಿ ನಡೆದ ಶರತ್ ಮಡಿವಾಳ ಹತ್ಯೆಯಲ್ಲೂ ಪಿಎಫ್ಐ ಸಂಘಟನೆಯವರು ಶಾಮೀಲಾಗಿರುವುದು ಸ್ಪಷ್ಟವಾಗಿದೆ. ಹೊನ್ನಾವರದ ಪರೇಶ್ ಮೇಸ್ತ ಹತ್ಯೆಯ ಪ್ರಕರಣದಲ್ಲಿನ ಆರೋಪಿಗಳಿಗೂ ಉಗ್ರವಾದಿ ಸಂಘಟನೆಗಳ ಜತೆ ನಂಟಿರುವ ಶಂಕೆ ಇದೆ’ ಎಂದು ದೂರಿದರು.
‘ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳು ನಿಷೇಧಿತ ಸಿಮಿ ಉಗ್ರ ಸಂಘಟನೆಗಳ ಪ್ರತಿರೂಪವಾಗಿವೆ. ಸಂತೋಷ್ ಹತ್ಯೆಯಲ್ಲಿಯೂ ಎಸ್‌ಡಿಪಿಐ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿರುವ ಕುರಿತು ಖಚಿತ ಮಾಹಿತಿ ಇದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಯನ್ನು ಕಳುಹಿಸಿ: ‘ಸಂತೋಷ್ ಹತ್ಯೆ ಪ್ರಕರಣವನ್ನು ಎನ್‌ಐಗೆ ವಹಿಸಬೇಕು. ಆತನ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ನೀಡಬೇಕು. ಆತನ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು’ ಎಂಬ ಒತ್ತಾಯವನ್ನು ಒಳಗೊಂಡ ರಾಜ್ಯಪಾಲರಿಗೆ ರವಾನಿಸುವ ಮನವಿ ಪತ್ರವನ್ನು ಸ್ವೀಕರಿಸಲು ಕೋರಿಕೆಯ ಮೇರೆಗೆ ಬಂದಿದ್ದ ಭೂ ಮಾಪನಾ ಇಲಾಖೆಯ ಅಧಿಕಾರಿ ರಾಜು ಪೂಜಾರಿಯವರ ಬಳಿ ಜಿಲ್ಲಾಧಿಕಾರಿಯವರನ್ನು ಸ್ಥಳಕ್ಕೆ ಬರುವಂತೆ ತಿಳಿಸಲು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
‘ಪ್ರತಿ ಬಾರಿಯೂ ಜಿಲ್ಲಾಧಿಕಾರಿ ಹೀಗೆಯೇ ಮಾಡುತ್ತಾರೆ. ನಮ್ಮ ಮನವಿ ಪತ್ರ ಸ್ವೀಕರಿಸಲು ಮಾತ್ರ ಅವರು ಕಚೇರಿಯಿಂದ ಕೆಳಕ್ಕಿಳಿಯುವುದಿಲ್ಲ’ ಎಂದು ದೂರಿದರು. ‘ಜಿಲ್ಲಾಧಿಕಾರಿ ಕಚೇರಿ ಕಾರ್ಯದ ನಿಮಿತ್ತ ಕುಮಟಾದತ್ತ ತೆರಳಿದ್ದು, ಅವರ ಬದಲಾಗಿ ನಾನೇ ಸ್ವೀಕರಿಸುತ್ತೇನೆ’ ಎಂದು ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಹೆಗ್ಡೆ ಕರ್ಕಿ, ನಗರ ಘಟಕದ ಅಧ್ಯಕ್ಷ ಮನೋಜ್ ಭಟ್, ನಾಗರಾಜ ನಾಯಕ, ರಾಜೇಶ ನಾಯ್ಕ ಸಿದ್ದಾಪುರ ಹಾಜರಿದ್ದರು.