ಕುಮಟಾ: ಜಿಲ್ಲಾ ಪಂಚಾಯತ ಉ.ಕ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕುಮಟಾ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವರ ಆಶ್ರಯದಲ್ಲಿ ಗೋಕರ್ಣದ ಸಾಣೆಕಟ್ಟೆಯ ಸರಕಾರಿ ಹಿರಿಯ ಪಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಹೆರವಟ್ಟಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶ್ರೀಮತಿ ಶಾರದಾ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಖಾಸಗಿ ಶಾಲೆಗಳಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಸರಕಾರಿ ಶಾಲೆಗಳಿಗೂ ನೀಡಲಾಗುತ್ತಿದೆ. ಶಾಲೆಗಳಲ್ಲಿ ನಡೆಯುವ ಇಂತಹ ವಾರ್ಷಿಕೋತ್ಸವಗಳು ಮಕ್ಕಳಿಗೆ ಮನರಂಜನೆ ನೀಡುವುದರೊಂದಿಗೆ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ ಎಂದರು.
ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶಿಕ್ಷಣ ತೀರಾ ಅಗತ್ಯವಾಗಿದೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಪಾಲಕರ ಇಂಗ್ಲಿಷ್ ಮೋಹದಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಲ್ಲದೇ ಮುಚ್ಚುವ ಸ್ಥಿತಿ ಎದುರಾಗಿದೆ. ಸರಕಾರಿ ಶಾಲೆಗಳಲ್ಲೂ ಉತ್ತಮ ಶೈಕ್ಷಣಿಕ ಅರ್ಹತೆಯುಳ್ಳ ಶಿಕ್ಷಕರಿದ್ದು ಉತ್ತಮ ಶಿಕ್ಷಣವನ್ನು ಪಡೆಯಬಹುದಾಗಿದೆ. ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸ್ನೇಹಿತ. ಹಾಗಾಗಿ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ನಮಗೆ ಜ್ಞಾನದ ಜೊತೆಗೆ ನಮ್ಮ ಏಕಾಂಗಿತನವನ್ನು ಹೋಗಲಾಡಿಸುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪುಸ್ತಕಾಭಿಮಾನ, ಕನ್ನಡಾಭಿಮಾನ, ಸಾಹಿತ್ಯಾಭಿಮಾನ ಮತ್ತು ದೇಶಾಭಿಮಾನವನ್ನು ಮೂಡಿಸುವ ಕೆಲಸವನ್ನು ಪಾಲಕರು ಹಾಗೂ ಶಿಕ್ಷಕರು ಮಾಡಬೇಕು. ಅಲ್ಲದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಹಾಗೂ ಅವರ ಮೇಲೆ ಒತ್ತಡ ಹೇರದೇ ಅವರ ಆಯ್ಕೆಗೆ ಮಾನ್ಯತೆ ನೀಡಬೇಕು ಎಂದು ಪಾಲಕರಿಗೆ ಕರೆ ನೀಡಿದರು. ಶಾಲೆಗಳಲ್ಲಿ ನಡೆಯುವ ಇಂತಹ ವಾರ್ಷಿಕ ಸ್ನೇಹ ಸಮ್ಮೇಳನಗಳಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕರ್ಣ ಗ್ರಾಮ ಪಂಚಾಯತದ ಉಪಾಧ್ಯಕ್ಷರಾದ ಶೇಖರ ಜಿ. ನಾಯ್ಕ ಅವರು ವಹಿಸಿದ್ದರು.
ಈ ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಗಾಯತ್ರಿ ಗೌಡ, ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಗೋಕರ್ಣ ಗ್ರಾ.ಪಂ. ಸದಸ್ಯೆ ವಿಜಯಾ ಮಹೇಶ ನಾಯಕ, ಅನಿಲ ನಾಡಕರ್ಣಿ, ದತ್ತಾ ಎಚ್. ನಾಯ್ಕ, ಶಾಂತಾರಾಮ ಎಚ್. ನಾಯಕ, ಗೋವಿಂದ ಎಂ. ನಾಯ್ಕ, ಓಮು ಟಿ. ನಾಯ್ಕ, ಮುಂತಾದ ಗಣ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.