ಭಟ್ಕಳ: ಇಲ್ಲಿನ ಮುಠ್ಠಳ್ಳಿ ಗ್ರಾಮ ಪಂಚಾಯತಿ ಬೇಹಳ್ಳಿ ಮಜಿರೆಯಲ್ಲಿ ಅರಣ್ಯ ಇಲಾಖೆಯವರು ಏಕಾಏಕಿ ಯಾವ ಮೂನ್ಸೂಚನೆ ಇಲ್ಲದೇ ಗಿಡಮರಗಳನ್ನು ಕಡಿದಿದ್ದುದ್ದನ್ನು ಕರ್ನಾಟಕ ಪ್ರಾಂತ ರೈತ ಸಂಘ ತೀವ್ರವಾಗಿ ಖಂಡಿಸಿದ್ದು ಈ ಬಗ್ಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಈ ಪ್ರದೇಶದಲ್ಲಿ ಕೆಲವು ದಿನದ ಹಿಂದೆ ಅರಣ್ಯ ಜಮೀನಿನ ಜಾಗದಲ್ಲಿ ಮರಗಳ ಕಟಾವು ಕಾರ್ಯ ಜಾರಿಯಲಿದ್ದು, ರೈತರಿಗೆ ಈ ಹಿಂದೆ ನೀಡಿದ ಹಾಡಿಯಲ್ಲಿ ಹಲವಾರು ವರ್ಷದಿಂದ ಬೆಳೆಸಿದಂತಹ ಗಿಡಮರಗಳನ್ನು ಏಕಾಏಕಿ ಯಾವುದೇ ಮಾಹಿತಿ ನೀಡದೇ ಸುಮಾರು 50ಕ್ಕೂ ಹೆಚ್ಚು ಎಕಾಸಿ ಸೇರಿದಂತೆ ಇತರೆ ಮರವನ್ನು ಕಡಿದು ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಕೇಳಲು ತೆರಳಿದರೆ ಸ್ಥಳಿಯರಿಗೆ ಸಮಂಜಸ ಉತ್ತರ ನೀಡದೇ ಉದ್ಘಟತ ಪ್ರದರ್ಶಿಸಿದ್ದಾರೆ. ಇದರಿಂದ ಅರಣ್ಯವಾಸಿಗಳಾದ ಪರಿಸರ ರಕ್ಷಣೆ ಮಾಡುತ್ತಾ ಬದುಕು ಸಾಗಿಸುವ ಬಡ ರೈತರ ಮೇಲೆ ಅವರ ದಿನನಿತ್ಯದ ಬದುಕಿನೊಡನೆ ಚೆಲ್ಲಾಟ ಮಾಡುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ವಿರೋಧಿಸುತ್ತದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಸ್ಥಳಿಯರಿಗೆ ಸಂಬಂಧಪಟ್ಟ ಹಾಡಿ ಜಾಗವನ್ನು ವಾಪಸ್ಸು ನೀಡಬೇಕಾಗಿ ಒತ್ತಾಯಿಸಿದರು.
ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಕಛೇರಿ ಶಿರಸೇದ್ದಾರ ಎಲ್.ಎ. ಭಟ್ಟ ಮನವಿಯನ್ನು ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಉಪಾಧ್ಯಕ್ಷ ಸುಭಾಸ ಕೊಪ್ಪಿಕರ್, ಪುಂಡಲೀಕ, ಶ್ರೀಧರ ನಾಯ್ಕ ಸೇರಿದಂತೆ ಬೇಹಳ್ಳಿ ಭಾಗದ ಗ್ರಾಮಸ್ಥರಾದ ನಾಗಪ್ಪ ನಾಯ್ಕ, ಲಲಿತಾ ನಾಯ್ಕ, ಮಂಜುನಾಥ ನಾಯ್ಕ, ನಾಗರಾಜ ನಾಯ್ಕ, ದುರ್ಗಪ್ಪ ನಾಯ್ಕ, ಮಾಸ್ತಮ್ಮ ನಾಯ್ಕ ಮುಂತಾದವರು ಇದ್ದರು.