ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಪರಾಹ್ನ 2 ಗಂಟೆಗೆ ಅರಮನೆ ಮೈದಾನದಲ್ಲಿ ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದು ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಂಡಿದೆ. ಅರಮನೆ ಮೈದಾನ ಸುತ್ತಮುತ್ತ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ದೇಶದ ಪ್ರಧಾನಿ ಸ್ವಾಗತಕ್ಕೆ ಸಿದ್ದವಾಗಿದೆ.
ಇಂದು ಮುಂಜಾನೆಯಿಂದಲೇ ಅರಮನೆ ಮೈದಾನ ರಸ್ತೆ ಉದ್ದಕ್ಕೂ ಪೊಲೀಸ್ ಸಿಬ್ಬಂದಿಗಳು ಬಂದು ನಿಯೋಜನೆಗೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದ 90 ದಿನಗಳ ಪರಿವರ್ತನಾ ಯಾತ್ರೆಯ ಸಮಾರೋಪ ಇಂದು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.
ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರೂವರೆ ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಹಲವು ಕಡೆಗಳಿಂದ ಕಾರ್ಯಕರ್ತರು ಬಸ್ಸು, ಜೀಪುಗಳಲ್ಲಿ ಬಂದು ನಗರದಲ್ಲಿ ಜಮಾಯಿಸಿದ್ದಾರೆ. ಪ್ರಧಾನಿ ಮೋದಿಯವರು ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ಹೊರಟು 3.30ರ ವೇಳೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್‍ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ 3.55ಕ್ಕೆ ಸಮಾವೇಶಕ್ಕೆ ಆಗಮಿಸಿ, 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ.
ಅರಮನೆ ಮೈದಾನದಲ್ಲಿ 2 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು ಸಾರ್ವಜನಿಕರಿಗೆ, ಬಿಜೆಪಿ ಕಾರ್ಯಕರ್ತರಿಗೆ ಈ ಮೂಲಕ ಆಸನದ ವ್ಯವಸ್ಥೆ ಮಾಡಲಾಗಿದೆ. 3200 ಚದರಡಿಯಲ್ಲಿ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. 1200 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬಂದಿರುವ ಕಾರ್ಯಕರ್ತರಿಗೆ ಊಟೋಪಚಾರ, ತಿಂಡಿ ವ್ಯವಸ್ಥೆಯನ್ನು ಮಾಡಲು 600 ಮಂದಿ ಬಾಣಸಿಗರು ಕೆಲಸ ಆರಂಭಿಸಿದ್ದಾರೆ.
ಕೇಂದ್ರ ಬಜೆಟ್ ಬಳಿಕ ಮೊದಲ ಸಾರ್ವಜನಿಕ ಭಾಷಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ವಿದೇಶಗಳಲ್ಲಿರುವ ಎನ್‍ಆರ್‍ಐಗಳಿಗೆ ಮೋದಿ ಭಾಷಣ ತಲುಪಿಸಲು ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ.
ಬಿಜೆಪಿ ಕರ್ನಾಟಕ, ಬಿಜೆಪಿ ಇಂಡಿಯಾ, ಬಿಜೆಪಿ ಟ್ವಿಟ್ಟರ್ ಸಾಮಾಜಿಕ ಜಾಲತಾಣಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಮೋದಿ ಭಾಷಣ ಪ್ರಸಾರ ಮಾಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ 200 ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಂದ ಫೇಸ್ ಬುಕ್ ಮೂಲಕ ಲೈವ್ ನೀಡಲು ತೀರ್ಮಾನ ತೆಗೆದುಕೊಂಡಿದ್ದು, ಮೋದಿ ಭಾಷಣ ಲೈವ್ ಪ್ರಸಾರ ಮಾಡಲೆಂದೇ ಆಯ್ದ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ.
ಇ ಶೌಚಾಲಯ ಸೇರಿ ಸಿದ್ದಪಡಿಸಲಾದ ಶೌಚಾಲಯಗಳು 300 ಇವೆ.16 ಲಕ್ಷ ಕಾರ್ಯಕರ್ತರಿಗೆ ನೀರಿ ಪ್ಯಾಕೆಟ್ ಗಳನ್ನು ವಿತರಿಸಲಾಗುತ್ತದೆ. 13,000 ಪೊಲೀಸ್ ಸಿಬ್ಬಂದಿಯನ್ನು ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.
ಬಿಜೆಪಿ ರ್ಯಾಲಿ ಹಿನ್ನೆಲೆಯಲ್ಲಿ ನಗರದ ಹಲವೆಡೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನಾಯಂಡಹಳ್ಳಿ, ಸುಮನಹಳ್ಳಿ, ಡಾ.ರಾಜ್ ಕುಮಾರ್ ಸಮಾಧಿ, ತುಮಕೂರು ರಸ್ತೆ ಬಲತಿರುವು ಪಡೆದು ಗೊರಗುಂಟೆಪಾಳ್ಯ, ಬಿಇಎಲ್, ಹೆಬ್ಬಾಳ ಮೇಲ್ಸೇತುವೆ ಮಾರ್ಗವಾಗಿ ಅರಮನೆ ಮೈದಾನ ಪ್ರವೇಶಿಸಿ ಮಾವಿನಕಾಯಿ ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು.
ಕನಕಪುರ ರಸ್ತೆ ಕಡೆಯಿಂದ ಬರುವ ವಾಹನಗಳು ಕನಕಪುರ ರಸ್ತೆ, ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ, ರಾಜಲಕ್ಷ್ಮಿ ಜಂಕ್ಷನ್, ಲಾಲ್ ಬಾಗ್ ಪಶ್ಚಿಮ ಗೇಟ್, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಟೌನ್ ಹಾಲ್, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಬಳಿ ಬಲ ತಿರುವು ಪಡೆದು ಪ್ಯಾಲೇಸ್ ರಸ್ತೆ, ಬಸವೇಶ್ವರ ವೃತ್ತ, ಹಳೆ ಹೈಗ್ರೌಂಡ್ಸ್ ಅಂಡರ್ ಪಾಸ್, ಜಯಮಹಲ್ ಮೂಲಕ ಸರ್ಕಸ್ ಮೈದಾನ ಪ್ರವೇಶಿಸಬಹುದು.
ಬನ್ನೇರುಘಟ್ಟ ರಸ್ತೆ ಕಡೆಯಿಂದ ಬರುವ ವಾಹನಗಳು ಡೈರಿ ವೃತ್ತ ಬಳಿ ಎಡ ತಿರುವು ಪಡೆದು ಡಾ.ಮರಿಗೌಡ ರಸ್ತೆ,ಲಾಲ್ ಬಾಗ್ ಮುಖ್ಯದ್ವಾರ, ಜೆ.ಸಿ.ರಸ್ತೆ ಮೂಲಕ ಅರಮನೆ ಮೈದಾನಕ್ಕೆ ಬರಬಹುದು. ಹೊಸೂರು ಕಡೆಯಿಂದ ಬರುವ ವಾಹನಗಳು ಮಡಿವಾಳ ಚೆಕ್ ಪೋಸ್ಟ್ ಎಡ ತಿರುವು ಪಡೆದು ಡೈರಿ ವೃತ್ತದ ಮಾರ್ಗದಲ್ಲಿ ಬಂದು ಅರಮನೆ ಮೈದಾನ ಪ್ರವೇಶಿಸಬಹುದು.
ದೊಡ್ಡಬಳ್ಳಾಪುರ ಕಡೆಯಿಂದ ಬರುವವರು ಮೇಜರ್ ಉನ್ನಿಕೃಷ್ಣ ರಸ್ತೆ ಜಂಕ್ಷನ್, ಯಲಹಂಕ ಪೊಲೀಸ್ ಠಾಣೆ ಜಂಕ್ಷನ್, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲ್ಸೇತುವೆ ಮೂಲಕ ಹಾಗೂ ಹಳೆ ಮದ್ರಾಸ್ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ಕೆ.ಆರ್.ಪುರ ತೂಗು ಸೇತುವೆ, ಹೆಣ್ಣೂರು ಜಂಕ್ಷನ್, ನಾಗವಾರ, ಹೆಬ್ಬಾಳ ಮೇಲ್ಸೇತುವೆ ಮಾರ್ಗವಾಗಿ ಅರಮನೆ ಮೈದಾನ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ.ಬಳ್ಳಾರಿ ರಸ್ತೆ ಮಾರ್ಗವಾಗಿ ಬರುವ ವಾಹನಗಳು ದೇವನಹಳ್ಳಿ, ಚಿಕ್ಕಜಾಲ, ಹುಣಸಮಾರನಹಳ್ಳಿ, ಕೋಗಿಲು ಜಂಕ್ಷನ್, ಕೊಡಿಗೇಹಳ್ಳಿ ಗೇಟ್ ಹೆಬ್ಬಾಳ ಮಾರ್ಗವಾಗಿ ಬಂದು ಅರಮನೆ ಮೈದಾನ ಪ್ರವೇಶಿಸಲು ಕಲ್ಪಿಸಲಾಗಿದೆ.