ಬೆಂಗಳೂರು: ಕೇಂದ್ರದಲ್ಲಿ ಯುಪಿಎ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ನೀಡುತ್ತಿದ್ದ ಅನುದಾನಕ್ಕಿಂತ ಹೆಚ್ಚು ಕೇಂದ್ರದ ಬಿಜೆಪಿ ಯ ಸರ್ಕಾರ ನೀಡುತ್ತಿದ್ದು, ಅದನ್ನು ಬಳಸಿಕೊಂಡು ಅಭಿವೃದ್ಧಿ ನಡೆದಿರುವುದು ಕರ್ನಾಟಕದಲ್ಲಿ ಎಲ್ಲಾದರೂ ಕಾಣುತ್ತಾ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಫೆ.04 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತಗೊಳಿಸಿಯೇ ಸಿದ್ಧ ಎಂದು ಹೇಳಿದ್ದಾರೆ.
ಕನ್ನಡದಲ್ಲೇ ಭಾಷಣ ಆರಂಭಿಸಿ ಕೆಂಪೇಗೌಡ, ಬಸವೇಶ್ವರ, ಸರ್ ಎಂ ವಿ ಸಂತ ಮಾದಾರ ಚನ್ನಯ್ಯ ಅವರನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನಿಂದ ಭಾರತಕ್ಕೆ ಗೌರವ ಬಂದಿದೆ, ಕೇಂದ್ರ ಸರ್ಕಾರ ಬಡವರ ಜೀವವನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯಕ್ಕೆ ಕೇವಲ 73 ಸಾವಿರ ಕೋಟಿ ರೂಪಾಯಿ ಅನುದಾನ ನೀಡುತ್ತಿತ್ತು, ಆದರೆ ನಮ್ಮ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ 2 ಲಕ್ಷ ಕೋಟಿ ರೂಪಾಯಿ ನೀಡಲು ನಿರ್ಧರಿಸಿದೆವು, ಆ ಅನುದಾನವನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಅಭಿವೃದ್ದಿಯಾಗಿರುವುದನ್ನು ಯಾರಾದರೂ ಕಂಡಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರಾರಂಭಿಸಿದ ಜನ್ ಧನ್ ಯೋಜನೆ, ಮುದ್ರಾ ಯೋಜನೆಯಂತಹ ಜನೋಪಯೋಗಿ ಸರ್ಕಾರಗಳಿಂದಾಗಿ ಕರ್ನಾಟಕದ ಜನತೆಗೂ ಉಪಯೋಗವಾಗಿದೆ. ರಾಜ್ಯದಲ್ಲಿ ಸರಿಯಾದ ಸರ್ಕಾರವಿದ್ದಿದ್ದರೆ ಕೇಂದ್ರ ಸರ್ಕಾರದ ಅನುದಾನ, ಯೋಜನೆಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ರಾಜ್ಯದ ಜನತೆಗೆ ಮತ್ತಷ್ಟು ಉಪಯೋಗವಾಗಿರುತ್ತಿತ್ತು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಬಂದರೆ ರಾಜ್ಯದ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯಲಿದೆ, ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ದೇಶದ, ರಾಜ್ಯದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ಸ್ವಹಿತಾಸಕ್ತಿ ಬಗ್ಗೆ ಕಾಳಜಿ ವಹಿಸುವ ಪಕ್ಷ ಹಾಗೂ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.