ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ಹಾಗೂ ಶೆಲ್ ದಾಳಿ ನಡೆಸಿದ್ದು, ಪರಿಣಾಮ ಕ್ಯಾಪ್ಟೆನ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿರುವ ಘಟನೆ ಭಾನುವಾರ ನಡೆದಿದೆ.

ಕ್ಯಾಪ್ಟನ್ ಕಪಿಲ್ ಕಂದ್ರು, ಹವಿಲ್ದಾರ್, ರೋಹನ್ ಲಾಲ್, ರೈಫಲ್ ಮ್ಯಾನ್ ರಾಮ್ ಅವತಾರ್ ಮತ್ತು ಶುಭಂ ಸಿಂಗ್ ಹುತಾತ್ಮರಾದ ಯೋಧರೆಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಇಬ್ಬರು ನಾಗರೀಕರು ಕೂಡ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ದುರ್ವರ್ತನೆ ಕುರಿತಂತ ಪ್ರತಿಕ್ರಿಯೆ ನೀಡಿರುವ ಸೇನೆ, ಪಾಕಿಸ್ತಾನ ಸೇನೆ ಕೇವಲ ಸಣ್ಣ ಶಸ್ತ್ರಾಸ್ತ್ರ ಅಥವಾ ಮಾರ್ಟರ್ ಶೆಲ್ ಗಳ ದಾಳಿಗಳಿಗಷ್ಟೇ ಸೀಮಿತವಾಗಿಲ್ಲ. ಕ್ಷಿಪಣಿ ಮೂಲಕವೂ ದಾಳಿ ನಡೆಸುತ್ತಿದೆ. ಕ್ಷಿಪಣಿಯ ಸ್ವರೂಪ ನಿರ್ದಿಷ್ಟವಾಗಿಲ್ಲ. ಆದರೆ, ಬಂಕರ್ ಗಳನ್ನು ಸ್ಫೋಟಿಸುವ ಸಾಮರ್ಥ್ಯಗಳನ್ನು ಹೊಂದಿದೆ ಎಂದು ಹೇಳಿದೆ.
ಭಾನುವಾರ ಸಂಜೆ 3 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆ ಗಡಿಯಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಆರಂಭಿಸಿತ್ತು. ಬಳಿಕ ಗಡಿ ನಿಯಂತ್ರಣ ರೇಖೆ ಬಳಿ ಸೇನಾಪಡೆಗಳನ್ನು ನಿಯೋಜಿಸಿ, ಪಾಕಿಸ್ತಾನ ಸೇನೆಯ ದಾಳಿಗೆ ಪ್ರತ್ಯುತ್ತರ ನೀಡಲಾಯಿತು ಎಂದು ತಿಳಿಸಿದೆ.

RELATED ARTICLES  ಕುಮಟಾ ಮೂಲದ ಶ್ರೀಕಾಂತ ಪಟಗಾರ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಶಾಲಾಗಳು 3 ದಿನ ಬಂದ್

ಗಡಿಯಲ್ಲಿ ಪಾಕಿಸ್ತಾನ ಸೇನಾಪಡೆಗಳು ತಮ್ಮ ಪುಂಡಾಟಗಳನ್ನು ಮುಂದುವರೆಸಿರುವ ಹಿನ್ನಲೆಯಲ್ಲಿ ರಜೌರಿ ಸೆಕ್ಟರ್’ನ ಗಡಿ ನಿಯಂತ್ರಣ ರೇಖೆ ಬಳಿಯಿರುವ ಶಾಲೆಗಳನ್ನು 3 ದಿನಗಳ ಕಾಲ ಬಂದ್ ಮಾಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಘಟನೆ ಸೇರಿದಂದೆ ಈ ವರ್ಷ ಪಾಕಿಸ್ತಾನದ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈ ಪೈಕಿ 9 ಮಂದಿ ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದು, 70 ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

RELATED ARTICLES  ಭಾರತೀಯ ಸಂಸ್ಕøತಿ ಪರಂಪರೆಯ ವರ್ಧಂತಿಗೆ ಶ್ರಮಿಸೋಣ: ರಾಘವೇಶ್ವರಶ್ರೀ

ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಗಡಿಯಲ್ಲಿ ಉಭಯ ಸೇನೆಗಳ ನಡುವೆ ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿವೆ ಎಂದು ವರದಿಗಳು ತಿಳಿಸಿವೆ.

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನದೊಂದಿಗೆ ಭಾರತ ಶಾಂತಿಯನ್ನು ಬಯಸುತ್ತಿದೆ. ಆದರೆ, ಪಾಕಿಸ್ತಾನದ ಒಂದೇ ಒಂದು ಬುಲೆಟ್ ಭಾರತದ ಗಡಿ ದಾಟಿದರೂ, ಅಸಂಖ್ಯಾತ ಬುಲೆಟ್ ಗಳ ಮೂಲಕ ಪ್ರತ್ಯುತ್ತರ ನೀಡುವಂತೆ ಸೇನಾಪಡೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದರು.