ಕಾರವಾರ: ಧನಬಲ ಹೆಚ್ಚಿರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಸಾಧ್ಯ ಎಂಬ ಪರಿಸ್ಥಿತಿಯಿದ್ದು ಇದನ್ನು ಬದಲಾವಣೆ ಮಾಡಲು ಪ್ರಯತ್ನಿಸೋಣ ಎಂದು ನಿರ್ಧರಿಸಿ ತಾನು ಚುನಾವಣಾ ಕಣಕ್ಕೆ ಇಳಿಯಲು ನಿರ್ಧರಿಸಿದ್ದೇನೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರದಲ್ಲಿ ಮೊದಲು ನೋಟಿನ ರಾಜಕಾರಣ ಇರಲಿಲ್ಲ. ಜನರು ಕೂಡ ಅರ್ಹತೆ ಪರಿಗಣಿಸಿ ಆಯ್ಕೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೋಟ್ಯಾಂತರ ರೂ.ಗಳನ್ನು ಹೊಂದಿರುವವರು ಮಾತ್ರ ಚುನಾವಣೆ ಕಣಕ್ಕಿಳಿಯ ಬೇಕಾದ ಪರಿಸ್ಥಿತಿ ಎದುರಾಗಿದೆ.

ಇದನ್ನು ನಿಲ್ಲಿಸ ಬೇಕು. ದುಡ್ಡಿದ್ದರೆ ಮಾತ್ರ ರಾಜಕೀಯ ಎಂದು ನಂಬಿರುವ ಜನರ ಭಾವನೆಯನ್ನು ಹೋಗಲಾಡಿಸಬೇಕು ಎಂದು ನಿರ್ಧಾರ ಮಾಡಿದ್ದೇನೆ. ಒಬ್ಬ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ ಕೂಡ ಚುನಾವಣೆಯನ್ನು ಎದುರಿಸುವಂತಾಗಬೇಕು. ಅವನಲ್ಲಿ ಸಮಾಜ ಮುಖಿ ಗುಣಗಳಿದ್ದರೆ, ಅಭಿವೃದ್ಧಿಯತ್ತ ಕೊಂಡೊಯ್ಯುವ ಚಿಂತನೆಗಳಿದ್ದರೆ ಅಂತಹ ವ್ಯಕ್ತಿಗೂ ಕೂಡ ಚುನಾವಣಾ ಟಿಕೇಟ್ ನೀಡುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ರಾಜಕೀಯಕ್ಕೆ ಧುಮುಕುವ ಉದ್ದೇಶದಿಂದ ತಾನು ಸಮಾಜಸೇವೆ ಮಾಡಿದ್ದಲ್ಲ. ಕಳೆದ ಸುಮಾರು 25 ವರ್ಷಗಳಿಂದಲೂ ಸಮಾಜ ಸೇವೆಯನ್ನು ಮಾಡುತ್ತ ಬಂದಿದ್ದೇನೆ. ಸುತ್ತ ಮುತ್ತಲಿನಲ್ಲಿ ಅಹಿತಕರ ಘಟನೆ ನಡೆದರೆ ಅದನ್ನು ಪರಿಹರಿಸುವಲ್ಲಿ, ಭ್ರಷ್ಟಾಚಾರ ಅನ್ಯಾಯಗಳ ವಿರುದ್ಧ, ಯಾವುದೇ ವ್ಯಕ್ತಿಗೆ ತೊಂದರೆ ಉಂಟಾದಲ್ಲಿ ಬಗೆಹರಿಸಲು ತನ್ನಿಂದಾದ ಅಳಿಲು ಸೇವೆಯನ್ನು ಮಾಡುತ್ತ ಬಂದಿದ್ದು ಅದನ್ನು ನನ್ನ ಜೀವಿತಾವಧಿಯ ವರೆಗು ಮುಂದುವರೆಸಿಕೊಂಡು ಹೋಗುತ್ತೇನೆ. ನನಗೆ ಯಾವುದೇ ದುರಾಸೆಗಳಿಲ್ಲ. ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡುವ ಉದ್ದೇಶವನ್ನಿಟ್ಟು ಕೊಂಡು ಕಣಕ್ಕಿಳಿಯಲು ಬಯಸಿದ್ದೇನೆ ಎಂದರು.

RELATED ARTICLES  ಸಾಲ ಮರುಪಾವತಿಗೆ ಆದೇಶ.

ಅನೇಕ ಹಿರಿಯರು ಬಂದು ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನಿಡಿದ್ದಾರೆ. ಅನುಭವ ಇರುವ ನೀವು ಯಾಕೆ ಬೇರೆಯವರ ತಪ್ಪು ಹುಡುಕುವುದೇಕೆ? ನೀವೆ ರಾಜಕಾರಣಕ್ಕೆ ಬಂದು ಅದನ್ನು ಸರಿಪಡಿಸ ಬಹುದಲ್ಲವೇ ಎಂಬ ಸಲಹೆ ನಿಡಿದ್ದಾರೆ. ಅವರ ಎಲ್ಲರ ಹೇಳಿಕೆಯನ್ನು ಗಮನಿಸಿ ಇಂದು ಜನರ ಸಭೆ ಕರೆದು ಅವರ ಒಪ್ಪಿಗೆಯಂತೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ವಹಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ, ಜಿಲ್ಲೆಯ ಅಭಿವೃದ್ಧಿಗಾಗಿ, ನಿರುದ್ಯೋಗಿಗಳಿಗೆ ಯೋಗ್ಯ ಉದ್ಯೋಗವನ್ನು ದೊರಕಿಸಿ ಕೊಡಬೇಕು ಎಂಬ ಚಿಂತನೆಗಳು ನನ್ನಲ್ಲಿವೆ. ರಾಜ್ಯ ಸರಕರವು ಅನೇಕ ಭಾಗ್ಯಗಳ ಸುರಿಮಳೆಗರೆದಿದ್ದು ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಕೃಷಿ ಸಾಲವನ್ನು ಮನ್ನಾ ಮಾಡಿದೆ. ಆದರೆ ನಾನು ಯಾವ ಕೃಷಿಕನೂ ಸಾಲಗಾರನಾಗಬಾರದು ಎಂಬ ಕನಸು ಕಂಡಿದ್ದೇನೆ. ಯಾರೂ ಕೂಡ ಉಚಿತ ಅಕ್ಕಿಯನ್ನು ಬಯಸುವಂತಹ ಸ್ಥಿತಿಗೆ ತಲುಪದೆ ಹಣ ಕೊಟ್ಟು ಖರೀದಿ ಮಾಡುವ ಸ್ವಾಭಿಮಾನ ಎಲ್ಲರಲ್ಲಿ ಉಂಟಾಗಬೇಕು ಎಂದು ಬಯಸಿದ್ದೇನೆ ಎಂದರು.

RELATED ARTICLES  ಅಡಿಕೆ ಕಳ್ಳತನಕ್ಕೆ ಸಂಬಂಧಿಸಿ ಆರೋಪಿಗಳು ಅರೆಸ್ಟ್

ಈಗಿರುವ ಎಲ್ಲ ಭಾಗ್ಯಗಳನ್ನು ಬಿಟ್ಟು ಉದ್ಯೋಗ ಭಾಗ್ಯವನ್ನು ನೀಡುವಂತಾಗಬೇಕು. ಪ್ರತಿ ಮನೆಯಲ್ಲಿನ ಯುವಕರಿಗೆ ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಏನಾದರೂ ಒಂದು ಉದ್ಯೋಗ ದೊರೆಯುವ ರೀತಿ ಕ್ರಮ ಕೈಗೊಳ್ಳಬೇಕು. ಹೀಗೆ ಒಂದು ಉದ್ಯೋಗ ಅವರಿಗೆ ಸಿಕ್ಕಿದೆ ಎಂದಾದ ಮೇಲೆ ಆತನೂ ಬೇರೆ ಯಾವ ಭಾಗ್ಯವನ್ನೂ ಬಯಸದೇ, ಯಾರ ಮುಂದೆಯೂ ಕೈಚಾಚದೆ ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗುತ್ತದೆ. ಅಲ್ಲದೆ ಯಾವುದೇ ಯೊಜನೆಯನ್ನು ಜಾರಿ ಮಾಡುವ ವೇಳೆ ಭ್ರಷ್ಟಾಚಾರವೇ ತುಂಬಿ ಅದರ ಲಾಭ ಸಾಮಾನ್ಯರಿಗೆ ಸಿಗದಂತೆ ಆಗುತ್ತದೆ. ಇವುಗಳನ್ನೆಲ್ಲ ತಪ್ಪಿಸುವಂತಹ ಚಿಂತನೆಗಳನ್ನು ತಾನು ಹೊಂದಿದ್ದು ಈ ನಿಟ್ಟಿನಲ್ಲಿ ಯಾವುದೇ ಪಕ್ಷದವರು ತನಗೆ ಅವಕಾಶ ನೀಡಿದರೂ ಅದನ್ನು ಸ್ವೀಕರಿಸಿ ಚುನಾವಣೆ ಕಣಕ್ಕಿಳಿಯುತ್ತೇನೆ ಎಂದರು.