ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿ ವಾಹಿನಿಯಿಂದ ಆಯೋಜಿಸಲ್ಪಟ್ಟ ಪರೀಕ್ಷೆ ಎಂಬುದು ಒತ್ತಡವಾಗಬಾರದು, ಬದಲಾಗಿ ಪರೀಕ್ಷೆಯನ್ನು ಸಂಭ್ರಮದಿಂದ ನಿರೀಕ್ಷಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಪರೀಕ್ಷಾ ಸಿದ್ಧತಾ ಕಾರ್ಯಾಗಾರ ಪರೀಕ್ಷೆ – ನಿರೀಕ್ಷೆ, ಮಂಡಲದ ಪದಾಧಿಕಾರಿಗಳು, ಶಾಸನತಂತ್ರದ ಪದಾಧಿಕಾರಿಗಳ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ದಿನಾಂಕ 4-2-2018 ರಂದು ಬೆಂಗಳೂರು ಉತ್ತರ ಮಂಡಲದ ಸಾಕ್ಷಾತ್ಕಾರ ಕಲಾನಿಕೇತನದಲ್ಲಿ ಜರುಗಿತು.

ಗುರುವಂದನೆ ಹಾಗೂ ದೀಪಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಭಾಧ್ಯಕ್ಷತೆ ವಹಿಸಿದ್ದ ಬೆಂಗಳೂರು ಉತ್ತರ ಮಂಡಲದ ದಿಗ್ದರ್ಶಕರಾದ ಶ್ರೀ ದಿವಾಣ ಕೇಶವ ಕುಮಾರ್ ಇವರು ತಮ್ಮ ಸ್ವಾನುಭವಗಳನ್ನು ಹಂಚಿಕೊಳ್ಳುವ ಮೂಲಕ ಮಕ್ಕಳಿಗೆ ಪ್ರೇರಣೆ ನೀಡುವಂತಹ ನುಡಿಗಳನ್ನಾಡಿದರು.
ಬಿ ಬ್ರೈನೀ ಸಂಸ್ಥೆಯ ಪ್ರಜ್ವಲ್ ಮಕ್ಕಳೊಡನೆ ಉತ್ತಮ ಸಂವಹನ ನಡೆಸಿ ಪರೀಕ್ಷಾ ಸಿದ್ಧತೆ ಹೇಗಿರಬೇಕು ಎಂಬುದರ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು
ಇದೊಂದು ಕೇವಲ ಒಮ್ಮುಖ ಕಾರ್ಯಕ್ರಮವಾಗದೆ ಅತ್ಯುತ್ತಮ ಸಂವಾದ ಕಾರ್ಯಕ್ರಮವಾಗಿತ್ತು. ಅವಿಭಕ್ತ ಬೆಂಗಳೂರು ಮಂಡಲದ ವಿವಿಧ ವಯೋಮಾನದ 17 ಮಕ್ಕಳು ತಮಗಿರುವ ಸಂಶಯಗಳನ್ನು ಪ್ರಕಟಪಡಿಸುವುದರ ಮೂಲಕ ಸೂಕ್ತ ಪರಿಹಾರಗಳನ್ನು ದೊರಕಿಸಿಕೊಂಡರು. ಅಂತರ್ಜಾಲದ ಯೋಗ್ಯ ಬಳಕೆ, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಒಳಗೊಂಡಂತೆ ವೇಳಾಪಟ್ಟಿಯ ಅವಶ್ಯಕತೆ, ಓದುವ ರೀತಿ, ಸಮಯ, ಸಮಯ ಪಾಲನೆ, ಸಮಯ ಹೊಂದಾಣಿಕೆ ಇತ್ಯಾದಿ ವಿಚಾರಗಳನ್ನು ವಿಶದವಾಗಿ ಸಂವಾದದ ಮೂಲಕ ತಿಳಿಸಿಕೊಟ್ಟರು.

RELATED ARTICLES  ಮೆಡಿಕಲ್ ಲ್ಯಾಬ್-ವೈದ್ಯರ ಒಳಒಪ್ಪಂದ; ಕೋಟ್ಯಂತರ ರೂ ಹಗರಣ ಪತ್ತೆ

ಅಭ್ಯಾಸದ ಸಮಯದಲ್ಲಿ ಅಭ್ಯಾಸ, ವಿಶ್ರಾಂತಿಯ ಸಮಯದಲ್ಲಿ ವಿಶ್ರಾಂತಿ, ಮನರಂಜನೆಯ ಸಮಯದಲ್ಲಿ ಮನರಂಜನೆ ಎಷ್ಟು ಅಗತ್ಯ ಮತ್ತು ಅವುಗಳನ್ನು ಹೇಗೆ ಹೊಂದಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿಶೇಷವಾಗಿ ತಿಳಿಸಿ ಕೊಡಲಾಯಿತು.
ಸತ್ರಗಳ ಆರಂಭದಲ್ಲಿ ಮಕ್ಕಳಿಂದ ಹಾಡು ಮಕ್ಕಳ ಮನ ತಣಿಸಿತು.

ಎರಡನೇ ಸತ್ರದ ಆರಂಭದಲ್ಲಿ ಬೆಂಗಳೂರು ಉತ್ತರ ಮಂಡಲದ ವಿದ್ಯಾರ್ಥಿ ವಾಹಿನಿಯ ಪ್ರಧಾನ ಶ್ರೀಮತಿ ಸಂಧ್ಯಾ ಕಾನತ್ತೂರು ಮಕ್ಕಳಿಗೆ ಕುಳಿತಲ್ಲೇ ಮನರಂಜಿಸುವ ಎರಡು ಮೂರು ಆಟಗಳನ್ನು ಆಡಿಸಿ, ನಂತರ ದೂರದರ್ಶನ, ಮೊಬೈಲ್ ಫೋನ್ ಗಳನ್ನು ಸದ್ಬಳಕೆ ಮಾತ್ರ ಮಾಡಿ, ಅತಿಯಾಗಿ ಬಳಸಬೇಡಿ. ಹಾಗೇ ಪಾಲಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಗಮನಕೊಡಿ ಎಂದು ತಿಳಿಸಿದರು. ಹಾಗೇ ಪರೀಕ್ಷಾ ಸಮಯದಲ್ಲಿ ಆರೋಗ್ಯ ಪಾಲನೆಯ ಅವಶ್ಯಕತೆ, ಆಹಾರ ಸೇವನೆಯಲ್ಲಿ ತೆಗೆದು ಕೊಳ್ಳಬೇಕಾದ ಮುಂಜಾಗ್ರತೆ ಇವುಗಳನ್ನು ತಿಳಿಸಿಕೊಟ್ಟರು.

RELATED ARTICLES  ಯುವಕ-ಯುವತಿಯ ಒಪ್ಪಿತ ಮದುವೆಗೆ ಅಡ್ಡಿಪಡಿಸುವ ಕಾಪ್ (ಸಮುದಾಯ) ಪಂಚಾಯಿತಿಗಳಿಗೆ ಸುಪ್ರೀಂಕೋರ್ಟ್ ಕಡಿವಾಣ.

ಇದೊಂದು ಕೇವಲ ತರಗತಿಯಾಗದೆ ಪರೀಕ್ಷಾ ಭೀತಿ ಹೋಗಲಾಡಿಸುವ ನಿಟ್ಟಿನಲ್ಲಿ ಅವಶ್ಯಕವಾದ ಆಪ್ತಸಲಹೆಯ ಮಾದರಿ ಕಾರ್ಯಕ್ರಮವಾಗಿತ್ತು ಎಂದು ಪಾಲಕರು ಅಭಿಪ್ರಾಯ ಪಟ್ಟರು.

ಸ್ಥಳಾವಕಾಶವನ್ನು ಒದಗಿಸಿಕೊಟ್ಟುದಲ್ಲದೆ, ಬೆಂಗಳೂರು ಉತ್ತರ ಮಂಡಲದ ಮಾತೃ ಪ್ರಧಾನ ಶ್ರೀಮತಿ ವೀಣಾ ಗೋಪಾಲಕೃಷ್ಣ ಅವರು ಹಾಗೂ ಮಾತೃ ವಿಭಾಗದವರು ಮಕ್ಕಳಿಗೆ ಸ್ವಾದಿಷ್ಟಕರ ತಿಂಡಿ ಹಾಗೂ ಪಾನೀಯದ ವ್ಯವಸ್ಥೆ ಮಾಡಿದ್ದರು.
ಸಮಾರೋಪ ಸಮಾರಂಭದಲ್ಲಿ ಮಕ್ಕಳನ್ನು ಪರೀಕ್ಷಾ ದೃಷ್ಟಿಯಿಂದ ಸಿದ್ಧಗೊಳಿಸಿದ ಪ್ರಜ್ವಲ್ ಅವರಿಗೆ ಧನ್ಯವಾದ ಸಮರ್ಪಿಸಿ , ಗವ್ಯೋತ್ಪನ್ನಗಳು ಹಾಗೂ ಶ್ರೀಸಂಸ್ಥಾನದವರ ಸಾಹಿತ್ಯವನ್ನು ಸ್ಮರಣಿಕೆಯಾಗಿ ನೀಡಲಾಯಿತು. ಹಿರಿಯರಾದ ವಿದುಷಿ ಸತ್ಯಭಾಮಾ ಬಾಳಿಲ ಇವರು ಮಂಡಲದ ಪರವಾಗಿ ಸ್ಮರಣಿಕೆಯನ್ನು ನೀಡಿದರು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವಿದ್ಯಾರ್ಥಿ ವಾಹಿನಿಯ ವಲಯ ಪ್ರಧಾನರು ಹಾಗೂ ವಿವಿಧ ಪದಾಧಿಕಾರಿಗಳ ಸಹಕಾರ ಸಹಭಾಗಿತ್ವವನ್ನು ಕೃತಜ್ಞತಾಪೂರ್ವಕ ಸ್ಮರಿಸಿದ ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನ ಶ್ರೀಮತಿ ಸಂಧ್ಯಾ ಕಾನತ್ತೂರು ಕಾರ್ಯಕ್ರಮದ ಯಶಸ್ಸನ್ನು ಶ್ರೀ ಗುರುಗಳ ಚರಣಕ್ಕೆ ಸಮರ್ಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ: ಸಂಧ್ಯಾ ಕಾನತ್ತೂರು
ವಿದ್ಯಾರ್ಥಿ ವಾಹಿನಿ ಪ್ರಧಾನ
ಬೆಂಗಳೂರು ಉತ್ತರ ಮಂಡಲ