ಕಾರವಾರ: ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ‘ವಿನೋದ ವಿಜ್ಞಾನ’ ಎಂಬ ವಿಶೇಷ ವಿಭಾಗ ಸ್ಥಾಪನೆಗೊಳ್ಳುತ್ತಿದೆ. ಗುತ್ತಿಗೆ ಪಡೆದ ಚಾಮರಾಜನಗರ ಮೂಲದ ಗ್ರಾಮ ಬಂಧು ಟ್ರಸ್ಟ್ ₹ 19 ಲಕ್ಷ ವೆಚ್ಚದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಇಲ್ಲಿ ಜೋಡಿಸುತ್ತಿದ್ದು, ಶೀಘ್ರದಲ್ಲೇ ಅದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
ಒಳಾಂಗಣ ಹಾಗೂ ಹೊರಾಂಗಣ ವಿಭಾಗದಲ್ಲಿ ಸುಮಾರು 40 ಮಾದರಿಗಳನ್ನು ಜೋಡಿಸಲಾಗುತ್ತಿದೆ. ಜತೆಗೆ ಕೇಂದ್ರದ ಹೊರ ಭಾಗದಲ್ಲಿ ದೇಶದ ಅತ್ಯುನ್ನತ ವಿಜ್ಞಾನಿಗಳಾದ ಸರ್ ಸಿ.ವಿ. ರಾಮನ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ಹೋಮಿ ಜಹಾಂಗಿರ್ ಬಾಬಾ, ಡಾ. ವಿಕ್ರಮ್ ಸಾರಾಭಾಯಿ ಅವರ ಪುತ್ಥಳಿ ಸ್ಥಾಪಿಸಲಾಗುತ್ತಿದೆ.
ಏನೇನಿರಲಿದೆ?: ಕೇಂದ್ರದಲ್ಲಿ ಕ್ಯೂರಿ ಬಿಂದು, ತೇಲುವ ಚೆಂಡು, ಗುರುತ್ವ ಬಾವಿ, ಸ್ನೇಕ್ ಪೆಂಡಲಮ್, ನ್ಯೂಟನ್ ತೊಟ್ಟಿಲು, ಅನುಕಂಪನಾ ಉಯ್ಯಾಲೆ, ಬಣ್ಣದ ಪಿರಾಮಿಡ್, ಮಿಥ್ಯಾತಂತಿ ವಾದ್ಯ, ಹೆಪ್ಪುಗಟ್ಟುವ ನೆರಳು, ಬಣ್ಣದ ನೆರಳು, ರೈಸಿಂಗ್ ಬಬಲ್ಸ್, ದ್ರವ ಪೈಂಟಿಂಗ್, ಕೆಲಿಡಿಯೊಸ್ಕೋಪ್, ಅಂತ್ಯವಿಲ್ಲದ ಬಾವಿ, ಲಿಸಾಜುವಿನ ವಿನ್ಯಾಸ, ಇಂಪಾಸಿಬಲ್ ಮಿಕ್ಸ್‍ಚರ್, ಪೈಥಾಗೋರಸ್ ಥಿಯರಿ, ರೈಸಿಂಗ್ ಆರ್ಕ್, ಮ್ಯಾಜಿಕ್ ವಾಟರ್ ಟ್ಯಾಪ್, ಟೆಲಿಸ್ಕೋಪ್, ಫೆರೊ ಫ್ಲಿಡ್, ವಿವಿಧ ಗ್ರಹಗಳಲ್ಲಿ ತೂಕ ನೋಡುವ ಯಂತ್ರ, ಬರ್ಡ್ ಇನ್ ಕೇಜ್, ಚಿಕ್ಕ ದಾರಿ, ಇಕೊ ಕ್ಯೂಬ್ ಸೇರಿದಂತೆ ಅನೇಕ ಮಾದರಿಗಳನ್ನು ಅಳವಡಿಸಲಾಗುತ್ತಿದೆ.
‘ಈಗಾಗಲೇ ಸುಮಾರು 20 ಮಾದರಿಗಳನ್ನು ಅಳವಡಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಉಳಿದೆಲ್ಲವನ್ನು ಜೋಡಿಸಲಾಗುತ್ತದೆ’ ಎಂದು ಗ್ರಾಮ ಬಂಧು ಟ್ರಸ್ಟ್‌ನ ಯೋಜನಾ ಸಂಪರ್ಕಧಿಕಾರಿ ಸುನೀಲ್ ಎಂ. ತಿಳಿಸಿದರು.
ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಬಾವಿಯೊಂದನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಎಷ್ಟು ಇಣುಕಿದರೂ ಅದರ ಅಂತ್ಯ ಕಾಣ ಸಿಗುವುದಿಲ್ಲ. ಬಾವಿಯ ಗೋಡೆಯನ್ನು ಎರಡು ಸಮತಲ ದರ್ಪಣದ ಮಧ್ಯೆ ಬರುವಂತೆ ಜೋಡಿಸಲಾಗಿದೆ. ಒಂದು ನೆಲದ ಮೇಲೆಯೂ ಮತ್ತೊಂದು ಬಾವಿಯ ಮೇಲ್ತುದಿಯಲ್ಲಿಯೂ ಆ ದರ್ಪಣವನ್ನು ಇಡಲಾಗಿದೆ. ಮೇಲಿರುವ ದರ್ಪಣ ಅರೆಕನ್ನಡಿಯಾಗಿದ್ದು, ಅದರ ಮೇಲೆ ಬಿದ್ದ ಬೆಳಕಿನ ಅಲ್ಪಭಾಗವು ಪ್ರತಿಫಲನಗೊಳ್ಳುತ್ತದೆ.
ಉಳಿದ ಭಾಗ ಅದರ ಮೂಲಕವೇ ಹಾದು ಹೋಗುತ್ತದೆ. ಅಂಥ ಕನ್ನಡಿ ಪ್ರಕಾಶಮಾನವಾದ ಬೆಳಕಿದ್ದಾಗ ನೈಜ ಕನ್ನಡಿಯಂತೆಯೂ, ಮಂದ ಬೆಳಕಿದ್ದಾಗ ಗಾಜಿನಂತೆಯೂ ವರ್ತಿಸುತ್ತದೆ. ಈ ಬಾವಿಯ ಒಳಭಾಗದಲ್ಲಿ ಹೆಚ್ಚು ಬೆಳಕಿದ್ದು, ಬಾವಿಯಗೋಡೆಯ ಬಿಂಬವು ಹಲವಾರು ಬಾರಿ ಪ್ರತಿಫಲನವಾಗಿ ಆಳವಾದ ಅಂತ್ಯವಿಲ್ಲದ ಬಾವಿಯೊಂದು ಇಲ್ಲಿ ಗೋಚರವಾಗುತ್ತದೆ.
ಕೇಂದ್ರದಲ್ಲಿ ‘ಗ್ರಹಗಳಲ್ಲಿ ನಿಮ್ಮ ತೂಕ’ (Weights on Planets) ಎಂಬ ವಿಶೇಷ ಮಾದರಿಯೊಂದನ್ನು ಇಡಲಾಗಿದೆ. ಇದು ವಿಜ್ಞಾನಾಸಕ್ತರಿಗೆ ವಿಶೇಷ ಅನುಭವ ನೀಡುತ್ತದೆ. ಭೂಮಿ, ಮಂಗಳ ಸೇರಿದಂತೆ ಸೌರ ಮಂಡಲದ 8 ಗ್ರಹಗಳಲ್ಲಿ ಹಾಗೂ ಚಂದ್ರನಲ್ಲಿ ನಿಮ್ಮ ತೂಕದಲ್ಲಿ ಎಷ್ಟು ವ್ಯತ್ಯಾಸ ಉಂಟಾಗುತ್ತದೆ ಎಂಬುದನ್ನು ಇದರಲ್ಲಿ ತಿಳಿದುಕೊಳ್ಳಹುದು.