ಹಾಸನ: ಇತಿಹಾಸ ಪ್ರಸಿದ್ಧ ಹಾಸನದ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ಶ್ರವಣಬೆಳಗೊಳದ ಗೊಮ್ಮಟೇಶ್ವರ ಭಗವಾನ್ ಶ್ರೀಬಾಹುಬಲಿಸ್ವಾಮಿಯ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಲು ಬುಧವಾರ ಆಗಮಿಸುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಸ್ವಾಗತಕ್ಕೆ ಜೈನಕಾಶಿ ಸಜ್ಜಾಗಿದ್ದು, ಜಿಲ್ಲಾಡಳಿತ ಸಕಲರೀತಿಯಲ್ಲೂ ಸಿದ್ಧತೆ ಪೂರ್ಣಗೊಳಿಸಿಕೊಂಡಿದೆ. ಕಾರ್ಯಕ್ರಮಕ್ಕಾಗಿ ಪಂಚಕಲ್ಯಾಣ ನಗರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ 1800 ಆಸನ ವ್ಯವಸ್ಥೆಯುಳ್ಳ ಚಾವುಂಡರಾಯ ಸಭಾಮಂಟಪದಲ್ಲಿ ಜರುಗಲಿವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಬೆಳಗ್ಗೆ 10.45ಕ್ಕೆ ಮಹಾಮಜ್ಜನ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಉಪಸ್ಥಿತರಿರಲಿದ್ದಾರೆ.

RELATED ARTICLES  ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

ಇನ್ನು ಮಹಾಮಜ್ಜನ ಉದ್ಘಾಟನೆ ಮೂಲಕ ರಾಷ್ಟ್ರಪತಿ ಕೋವಿಂದ್ ಅವರು ಈ ಐತಿಹಾಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ ಮೂರನೇ ರಾಷ್ಟ್ರಪತಿಗಳು ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ 1993ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ, 2006ರಲ್ಲಿ ಅಂದಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಮಹಾಮಜ್ಜನವನ್ನು ಉದ್ಘಾಟಿಸಿದ್ದರು. ಇನ್ನು ಫೆಬ್ರವರಿ 14ರಂದು ಮಜ್ಜನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದು, ಜಿಲ್ಲಾಡಳಿತ ಅಧಿಕೃತ ಪ್ರವಾಸ ಪಟ್ಟಿಯ ನಿರೀಕ್ಷೆಯಲ್ಲಿದೆ. ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ 2 ತಿಂಗಳು ಮುಂಚಿತವಾಗಿಯೇ ಮೋದಿ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿತ್ತಾದರೂ, ಪ್ರಧಾನಿ ಕಚೇರಿಯಿಂದ ಅವರ ಆಗಮನದ ಬಗ್ಗೆ ಖಚಿತ ಭರವಸೆ ದೊರಕಿರಲಿಲ್ಲ. ಇದೀಗ ಪ್ರಧಾನಿ ಕಾರ್ಯಾಲಯ ಕಾರ್ಯಕ್ರಮಕ್ಕೆ ಮೋದಿ ಆಗಮಿಸುವ ಕುರಿತು ಮಾಹಿತಿ ನೀಡಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 15-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬುಧವಾರ ರಾಷ್ಟ್ರಪತಿ ಚಾಲನೆ ನೀಡಿದರೂ, ವಿಂಧ್ಯಗಿರಿ ಮೇಲಿನ ಬಾಹುಬಲಿ ಮೂರ್ತಿಗೆ ಪ್ರಥಮ ಮಹಾಮಜ್ಜನ ನಡೆಯುವುದು ಫೆಬ್ರವರಿ 17ರಂದು. ಅಂದಿನಿಂದ ನಿರಂತರವಾಗಿ ಫೆಬ್ರವರಿ 25ರವರೆಗೆ ನಿತ್ಯವೂ 1008 ಕಳಸಗಳ ಮಹಾಮಜ್ಜನ ನೆರವೇರುತ್ತದೆ. 26ರಂದು ಮಹಾಮಸ್ತಕಾಭಿಷೇಕ ಸಂಪನ್ನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ರಾಷ್ಟ್ರಪತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಹೆಲಿಪ್ಯಾಡ್​ನಿಂದ ಚಾವುಂಡರಾಯ ಸಭಾಮಂಟಪಕ್ಕೆ ರಾಷ್ಟ್ರಪತಿಗಳ ಕಾರು ಸಾಗುವ ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರು ರಸ್ತೆಗೆ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ.