ಬೆಂಗಳೂರು: ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಕನ್ನಡ ಪರ ಸಂಘಟನೆಗಳಲ್ಲಿನ ಬಿರುಕು ಕೂಡ ಬಟಾ ಬಯಲಾಗಿದೆ.ಕನ್ನಡ ಪರ ಸಂಘಟನೆಗಳ ಮುಖಂಡರ ನಡುವಿನ ಸ್ವಪ್ರತಿಷ್ಠೆಯಿಂದಾಗಿ ಒಗ್ಗಟ್ಟು ಮುರಿದು ಹೋದಂತಾಗಿದ್ದು, ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳಿಗೆ ಬಂದ್ ಗೆ ಅನುಮತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏತನ್ಮಧ್ಯೆ ಕೋಲಾರ-ಹುಬ್ಬಳ್ಳಿ ಹೊರತು ಪಡಿಸಿ ರಾಜ್ಯಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಎಂದಿನಂತೆ ಸಾಗಿದೆ.ಇನ್ನು ಬಂದ್ ವಿಫಲವಾಗಿರುವುದಕ್ಕೆ ಕನ್ನಡಪರ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರೆತೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಬಂದ್ ಗೆ ಕರೆ ನೀಡಿದ ವಾಟಾಳ್ ನಾಗರಾಡ್ ಮತ್ತು ಬಂದ್ ನಿಂದ ದೂರ ಉಳಿದಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.