ಬೆಂಗಳೂರು : ರಾಜ್ಯ ಮತ್ತು ದೇಶದಲ್ಲಿ ಕೋಮು ಗಲಭೆಗಳೆನ್ನುವುದು ಸಾಮಾನ್ಯ ವಿಷಯವಾಗಿದೆ. ಒಂದು ಧರ್ಮದ ವ್ಯಕ್ತಿಯ ಕೊಲೆಯಾದರೆ, ಅದನ್ನು ಅನ್ಯಧರ್ಮೀಯರ ಮೇಲೆ ಹೊರಿಸುವುದು ಸಾಧಾರಣವಾಗಿದೆ. ಆದರೆ, ಕೋಮು ಗಲಭೆಗಳಿಗೆ ಬಲಿಯಾಗುತ್ತಿರುವವರು ಸಾಮಾನ್ಯ ಜನತೆ ಎಂದು ಹೇಳುತ್ತಿದೆ ಕೇಂದ್ರ ಗೃಹ ಇಲಾಖೆ.
2017ನೇ ಸಾಲಿನಲ್ಲಿ ಅತಿ ಹೆಚ್ಚು ಕೋಮು ಗಲಭೆ ನಡೆದ ರಾಜ್ಯಗಳ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಗಿರಿರಾಜ್ ಇಂದು ಸದನದಲ್ಲಿ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರ ಮಾಹಿತಿ ಪ್ರಕಾರ 2017ನೇ ವರ್ಷದಲ್ಲಿ ಅತಿ ಹೆಚ್ಚು ಕೋಮು ಗಲಭೆ ನಡೆದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದ್ವೀತಿಯ ಸ್ಥಾನದಲ್ಲಿದೆ.
2017ರಲ್ಲಿ ಕರ್ನಾಟಕದಲ್ಲಿ ಒಟ್ಟು 100 ಗಲಭೆಗಳು ನಡೆದಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 229 ಮಂದಿ ಗಾಯಗೊಂಡಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 3ನೇ ಸ್ಥಾನದಲ್ಲಿರುವ ರಾಜಸ್ತಾನದಲ್ಲಿ 95, ಬಿಹಾರದಲ್ಲಿ 80 ಮತ್ತು ಮಧ್ಯಪ್ರದೇಶದಲ್ಲಿ 50 ಕೋಮು ಗಲಭೆಗಳಾಗಿದೆ.
ಯೋಗಿ ಆಧಿತ್ಯನಾಥರ ಉತ್ತರ ಪ್ರದೇಶ ಕೋಮುಗಲಭೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. 2017ರ ಅವಧಿಯಲ್ಲಿ 195 ಗಲಭೆಗಳಾಗಿದ್ದು, 44 ಮಂದಿ ಸಾವನ್ನಪ್ಪಿದ್ದಾರೆ. 542 ಮಂದಿ ಗಲಭೆಗಳಲ್ಲಿ ಗಾಯಗೊಂಡಿದ್ದಾರೆ. ಕರ್ನಾಟಕ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಕ್ಷಗಳು ಅಧಿಕಾರ ನಡೆಸುತ್ತಿವೆ.