ಬೆಂಗಳೂರು: “ಅಯ್ಯೋ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಖಾಲಿ ಹೊಡೀತಿದೆಯಂತೆ, ಆ ಕಾಲೇಜಿಗೆ ಯಾರೂ ಸೇರುವವರೆ ಇಲ್ಲವಂತೆ, ಈ ಕಾಲೇಜಲ್ಲಿ ನಾಲ್ಕು ಕೋರ್ಸ್ ಗಳನ್ನು ಕ್ಲೋಸ್ ಮಾಡ್ತಾರಂತೆ, ಆ ಕಾಲೇಜನ್ನೇ ಮುಚ್ಚಿ ಬಿಡ್ತಾರಂತೆ..” ಹೀಗೆ ಸಾಲು ಸಾಲು ಮಾತುಗಳು ಇತ್ತೀಚೆಗೆ ಕೇಳಿಬರುತ್ತಿವೆ.

“ಇನ್ನು ಮುಂದೆ, ಇಂಜಿನಿಯರ್ ಗಳಿಗೆ ಭವಿಷ್ಯ ಇಲ್ವಾ.., ತಮ್ಮ ಮಕ್ಕಳನ್ನು ಹಾಗಾದ್ರೆ, ಯಾವ ಕೋರ್ಸ್ ಗೆ ಸೇರಿಸಬೇಕು, ಐಟಿ ಕಂಪನಿಗಳೆಲ್ಲಾ ನೌಕರಿ ಕಡಿತ ಮಾಡ್ತಾ ಇವೆಯಂತೆ, ಹಾಗಾದ್ರೆ, ತಮ್ಮ ಮಕ್ಕಳ ಭವಿಷ್ಯ ಏನು..? ” ಹೀಗೆ ಹಲವಾರು ಪ್ರಶ್ನೆಗಳೂ ಕೂಡ ಪೋಷಕರನ್ನು ಕಾಡತೊಡಗಿವೆ.

ಹೌದು, ಅದೊಂದು ಕಾಲವಿತ್ತು. ತಮ್ಮ ಮಗ/ಮಗಳು ಇಂಜಿನಿಯರ್ರೇ ಆಗಬೇಕು ಎಂದು ಬಯಸುವ ಪೋಷಕರಿದ್ದರು. ಅದರಲ್ಲೂ ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡ ಮೇಲಂತೂ ಕರ್ನಾಟಕದ ಹಳ್ಳಿಯ, ಮೂಲೆಯ ಪೋಷಕರು ಕೂಡಾ ತಮ್ಮ ಮಕ್ಕಳು ಇಂಜಿನಿಯರ್ ಆಗಬೇಕು ಎಂದು ಹಂಬಲಿಸುತ್ತಿದ್ದರು. ಮನೆಯಲ್ಲಿ ಇಂಜಿನಿಯರ್ ಓದಿರುವ ಮಕ್ಕಳಿದ್ರೆ ಸಾಕು ಕೈ ತುಂಬಾ ಸಂಬಳ ಪಡೆಯುತ್ತಾರೆ ಅನ್ನುವ ನಂಬಿಕೆ ಇತ್ತು. ಹೌದು ಮಕ್ಕಳು ಇಂಜಿನಿಯರಿಂಗ್ ಪದವಿ ಪಡೆದು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಅಂದ್ರೆ ಪೋಷಕರಿಗೆ ನೆಮ್ಮದಿ.

RELATED ARTICLES  ಮೇಯಲು ಬಿಟ್ಟ ದನವನ್ನು ಕತ್ತರಿಸಿ ಹತ್ಯೆ: ಮಾಲೀಕನನ್ನು ಕಂಡು ಆರೋಪಿ ಪರಾರಿ

ಹೀಗೆ ಕಳೆದೆರಡು ದಶಕಗಳ ಹಿಂದೆ, ಯಾವಾಗ ಇಂಜಿನಿಯರಿಂಗ್ ಹುದ್ದೆಗಳಿಗೆ ಬೇಡಿಕೆ ಹೆಚ್ಚಾಗತೊಡಗಿತೋ. ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತತೊಡಗಿತು. ಸಾವಿರಾರು ವಿದ್ಯಾರ್ಥಿಗಳು ಭವಿಷ್ಯದ ಕನಸು ಹೊತ್ತು ಕಾಲೇಜು ಸೇರತೊಡಗಿದ್ರು. ಆದ್ರೆ ಯಾವಾಗ ಇಂಜಿನಿಯರಿಂಗ್ ಕಾಲೇಜು ಸೇರಿದ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ ಅನ್ನುವುದು ಗೊತ್ತಾಗತೊಡಗಿತೋ ಪೋಷಕರಲ್ಲಿ ಈಗ ಆತಂಕ ಶುರುವಾಗಿದೆ.

ಈ ನಡುವೆ All India Council for Technical Education ಸಂಸ್ಥೆಯ ವರದಿಯೊಂದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಹುಟ್ಟಿಸಿದೆ. 800ಕ್ಕೂ ಹೆಚ್ಚು ಕಾಲೇಜುಗಳು ಬಾಗಿಲು ಹಾಕಲಿವೆ ಅನ್ನುವ ವರದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಾಲಿಗೆ ಬರ ಸಿಡಿಲಾಗಿದೆ. ದೇಶದ ಹಲವಾರು ಸಂಸ್ಥೆಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೆಲಸ ಖಾಲಿ ಇದೆ ಅನ್ನುತ್ತಿದೆ. ಮತ್ತೊಂದು ಕಡೆ ಇಂಜಿನಿಯರಿಂಗ್ ಓದಿದ್ರೂ ಕೆಲಸ ಇಲ್ಲ ಅನ್ನುವ ಅಳಲು.

ಈ ಗೊಂದಲ ಮತ್ತು ಸಮಸ್ಯೆಯ ಬೆನ್ನು ಹತ್ತಿದ ನ್ಯೂಸ್ ಕೋಡ್ ತಂಡಕ್ಕೆ ಸಿಕ್ಕ ಮಾಹಿತಿ ಬೆಚ್ಚಿ ಬೀಳಿಸುವಂತಿದೆ. ಕರ್ನಾಟಕದ 20 ಕಾಲೇಜುಗಳು ಸೇರಿದಂತೆ ದೇಶದ 800 ಕಾಲೇಜುಗಳು ನಮಗೆ ಇಂಜಿನಿಯರಿಂಗ್ ಕಾಲೇಜು ನಡೆಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನಮಗೆ ಕೊಟ್ಟಿರುವ ಅನುಮತಿಯನ್ನು ರದ್ದುಗೊಳಿಸಿ ಎಂದು All India Council for Technical Education ಸಂಸ್ಥೆಗೆ ಮನವಿ ಮಾಡಿದೆ.

RELATED ARTICLES  ಕರಾವಳಿಯಿಂದಲೇ ಶಾ ಓಟಿನ ಬೇಟೆ! ಫೆ.18-20ರ ವರೆಗೆ ದ.ಕ., ಉಡುಪಿ, ಉ. ಕನ್ನಡ ಜಿಲ್ಲೆಗಳಲ್ಲಿ ಚುನಾವಣಪೂರ್ವ ಶಕ್ತಿ ಪ್ರದರ್ಶನ!

ಈ ಸಮಸ್ಯೆಗೆ AICTE ಕಾರಣಗಳನ್ನು ಪತ್ತೆ ಮಾಡಿದೆ. ಮೂಲಭೂತ ಸೌಕರ್ಯಗಳ ಕೊರತೆ, ಉತ್ತಮ ಶಿಕ್ಷಕರ ಕೊರತೆ ಮತ್ತು ಪ್ರಾಕ್ಟಿಕಲ್ ಬದುಕಿಗೆ ಬೇಕಾದ ಸಿಲೆಬಸ್ ಕೊರತೆ. ಇವುಗಳನ್ನು ಪರಿಹರಿಸಿದರೆ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎಂಬ ಆಶಯ ಅದರದ್ದು. ಹಾಗಾಗಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಡಲೇಬೇಕಾದ ಇಂಟರ್ನ್ ಶಿಪ್ ಬಗ್ಗೆ ಹೆಚ್ಚು ಅರಿವು ಮೂಡಿಸುವುದು ಮೊದಲ ಆದ್ಯತೆಯಾಗಿದೆ. ಅಲ್ಲದೆ, TCH, BEd, ಶಿಕ್ಷಣ ತರಬೇತಿ ಇರುವಂತೆ ಇಂಜಿನಿಯರ್ ಕಾಲೇಜುಗಳ ಉಪನ್ಯಾಸಕರಿಗೂ ವಿಶೇಷ ತರಬೇತಿಯನ್ನು ಕಡ್ಡಾಯ ಮಾಡಲು ಚಿಂತನೆ ನಡೆಸಲಾಗಿದೆ. ಇದು ಈ ವರ್ಷದಿಂದಲೇ ಜಾರಿಗೆ ಬರಲಿದೆ. ಇಷ್ಟಾದಲ್ಲಿ, ವಿವಿಧ ಕಂಪನಿಗಳು ವಿದ್ಯಾರ್ಥಿಗಳತ್ತ ಮುಖಮಾಡಲಿವೆ, ಉದ್ಯೋಗ ಎಲ್ಲರಿಗೂ ಸಿಗಲಿವೆ. ಹೀಗಾದಲ್ಲಿ ಮಾತ್ರ, ಆಕರ್ಷಣೆ ಕಳೆದುಕೊಂಡಿರುವ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಮತ್ತೆ ಬೇಡಿಕೆ ಹೆಚ್ಚಲಿದೆ. ಪೋಷಕರ ಆತಂಕ ದೂರಾಗಲಿದೆ.