ಕುಮಟಾ: ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಜಿದ್ದಾಜಿದ್ದಿಯ ಚುನಾವಣೆಯ ಪ್ರಚಾರಕ್ಕೆ ಅಬ್ಬರದ ಮುನ್ನುಡಿ ಬರೆದು ತೆರಳಿದ್ದಾರೆ. ಬಿಜೆಪಿಯ ಚಾಣಾಕ್ಯ ಎಂದೇ ಗುರುತಿಸಲಾಗುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗಾಗಲೇ ರಾಜ್ಯದಲ್ಲಿ ತಮ್ಮ ಚುನಾವಣಾ ತಂತ್ರಗಾರಿಕೆ ಆರಂಭಿಸಿದ್ದಾರೆ.
‘ಕಾಂಗ್ರೆಸ್ ಮುಕ್ತ ಕರ್ನಾಟಕ’ ನಿರ್ಮಾಣ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಣತೊಟ್ಟಿದ್ದಾರೆ. ರಾಜ್ಯ ಬಿಜೆಪಿ ನಾಯಕರನ್ನು ಬಡಿದೆಬ್ಬಿಸಿ ಚುನಾವಣಾ ಚಟುವಟಿಕೆ ಚುರುಕುಗೊಳಿಸಲು ಸ್ವತಃ ಅಮಿತ್ ಶಾ ಅವರೇ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.
ಅವರೀಗ ಬಿಜೆಪಿಯ ಭದ್ರಕೋಟೆಯಾಗಿದ್ದ ಕರಾವಳಿ ಜಿಲ್ಲೆಗಳನ್ನು ಮತ್ತೆ ವಶ ಪಡಿಸಿಕೊಳ್ಳಲು ತಂತ್ರ ರೂಪಿಸಿದ್ದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಮೂರು ದಿನಗಳ ಕಾಲ ರಾಜ್ಯ ಕರಾವಳಿ ಜಿಲ್ಲೆಗಳಿಗೆ ಅಮಿತ್ ಶಾ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಫೆ. 20 ರಂದು ಮಧ್ಯಾಹ್ನ 2:30 ಗಂಟೆಗೆ ಉತ್ತರ ಕನ್ನಡದ ಜಿಲ್ಲೆಯ ಕುಮಟಾಕ್ಕೆ ಭೇಟಿ ನೀಡಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆಎನ್ನಲಾಗಿತ್ತು. ಆದರೆ ಅದೀಗ ಖಚಿತವಾಗಿದ್ದು ಕುಮಟಾದಲ್ಲಿ ಆ ಕುರಿತಾದ ಪೂರ್ವಭಾವಿ ಸಭೆ ಕೂಡಾ ನಡೆದಿದೆ.
ಶಾ ಅವರ ಭೇಟಿಯ ಕಾರ್ಯಕ್ರಮದ ಪೂರ್ಣ ವಿವರಗಳು ಇನ್ನೇನು ಲಭ್ಯವಾಗಬೇಕಿದೆ. ಆದರೆ ಶಾ ಬರುವಿಕೆ ಬಿಜೆಪಿಗರಲ್ಲಿ ಹೊಸ ಸಂಚಲನ ಮೂಡಿಸಿದೆ .ಪಕ್ಷ ಸಂಘಟನೆಗೆ ಅದು ಇನ್ನಷ್ಟು ಉತ್ಸಾಹ ನೀಡಲಿದೆ ಎನ್ನಲಾಗಿದೆ.