ಭಟ್ಕಳ: ತಾಲೂಕಿನ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ಬಂಡಿಮನೆ ಮಜಿರೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಿಗಡಿ (ಚಟ್ಲಿ) ಸಾಕಣಾ ಕೇಂದ್ರ ನಡೆಯುತ್ತಿದ್ದು, ಇದರಿಂದ ಇಲ್ಲಿನ ಸ್ಥಳಿಯರಿಗೆ ಬದುಕಲು ಹಾಗೂ ನೂರಾರು ಎಕರೆ ಕೃಷಿ ಭೂಮಿ ನಾಶವಾಗಿ ಜಮೀನು ಫಲವತ್ತೆ ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ.
ಈ ಪ್ರದೇಶದಲ್ಲಿ ಈಗಾಗಲೇ 7-8 ಸಿಗಡಿ ಪ್ಲ್ಯಾಂಡಗಳು ತಲೆಯೆತ್ತಿವೆ. ಈ ಸಿಗಡಿ ಪ್ಲ್ಯಾಂಡಗಳಲ್ಲಿರುವ ಉಪ್ಪು ನೀರಿನ ಪ್ರಭಾವದಿಂದ ಅಕ್ಕ ಪಕ್ಕದಲ್ಲಿ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಯಲ್ಲಿ ಇಳುವರಿ ತೆಗೆಯಲು ರೈತರಿಗೆ ತೊಂದರೆಯಾಗುತ್ತಿದೆ. ಮುಖ್ಯವಾಗಿ ಈ ಪ್ಲ್ಯಾಂಟನಲ್ಲಿರುವ ಉಪ್ಪು ನೀರು ಶೇಖರಣೆಯಿಂದ ಅಕ್ಕಪಕ್ಕದಲ್ಲಿರುವ ಗದ್ದೆಗಳಲ್ಲಿ ಉಪ್ಪು ನೀರಿನ ಪ್ರಭಾವ ಜಾಸ್ತಿಯಾಗಿದೆ. ಇದರಿಂದ ಜಮೀನಿನಲ್ಲಿ ಬೆಳೆಯುವ ಭತ್ತ, ಶೇಂಗಾ ಸೇರಿದಂತೆ ಮುಂತಾದ ಬೆಳೆಗಳು ಫಸಲು ಕಾಣದೇ ಗದ್ದೆಗಳನ್ನು ಹಾಗೆಯೇ ಖಾಲಿ ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಸಿಗಡಿ ಪ್ಲ್ಯಾಂಟಗಳಿಂದ ಅಕ್ಕಪಕ್ಕದ ಕುಡಿಯುವ ನೀರಿನ ಬಾವಿಯ ನೀರು ಸಹ ಉಪ್ಪಾಗಿದ್ದು, ಕುಡಿಯಲು ಯೋಗ್ಯವಲ್ಲದ ನೀರು ಸಿಗುತ್ತಿದೆ. ಹಗಲು ರಾತ್ರಿಯೆನ್ನದೇ ಸಾಕಣಾ ಕೇಂದ್ರದ ಜನರೇಟರ್ ಚಾಲನೆಯಲ್ಲಿಟ್ಟಿರುವುದರಿಂದ ಸ್ಥಳಿಯರಿಗೆ, ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಬ್ಧಮಾಲಿನ್ಯ ಉಂಟಾಗಿದೆ. ಪರೀಕ್ಷೆ ಸನಿಹದ ಸಂಧರ್ಭದಲ್ಲಿದ್ದು ವಿದ್ಯಾರ್ಥಿಗಳ ಪರೀಕ್ಷೆಗೆ ಮೇಲೆ ಪರಿಣಾಮ ಬೀಳಲಿದೆ. ಇನ್ನು ಹಾಗೋ ಹೀಗೋ ಸ್ಥಳಿಯರು ಊರಿಗೆ ಒಂದು ಸಂಪರ್ಕ ರಸ್ತೆ ಮಾಡಿಕೊಂಡಿದ್ದು, ಮಣ್ಣಿನ ರಸ್ತೆಯಿಂದ ಕೂಡಿದೆ. ಆದರೆ ಈಗ ಈ ರಸ್ತೆಯೂ ಸಹ ಹಾಳಾಗುತ್ತಿದ್ದು ಪ್ರತಿನಿತ್ಯ ಎಣಿಕೆಗೆ ಸಾಧ್ಯವಾದಷ್ಟು ಘನ ವಾಹನಗಳಾದ ಲಾರಿಗಳ ಓಡಾಟದಿಂದ ರಸ್ತೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತಿದೆ. ಕೇವಲ ಜನರಿಗೆ ಹಾಗೂ ಲಘು ವಾಹನ ಓಡಾಟಕ್ಕೆ ನಿರ್ಮಿತವಾದ ರಸ್ತೆ ರಸ್ತೆ ಅದೋಗತಿಗೆ ತಲುಪಿದ್ದು, ಜನರಿಗೆ ಸಂಪರ್ಕ ರಸ್ತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಇಲ್ಲಿನ ಎಷ್ಟು ಸಾಕಣಾಧಾರರಿಗೆ ಪರವಾನಿಗೆ ಪತ್ರವಿದೆ? ಹಾಗೂ ಈ ಬಗ್ಗೆ ಸ್ಥಳೀಯ ಪಂಚಾಯತ್ ಗಮನಕ್ಕೆ ಸಿಕ್ಕಿದೆಯೇ? ಸ್ಥಳಿಯ ಶಿರಾಲಿ ಗ್ರಾ.ಪಂ. ಈ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಹಿತಾಸಕ್ತಿಗೆ ಬಗ್ಗೆ ಕಾರ್ಯ ಮಾಡಬೇಕು ವಿನಃ ಅಧಿಕಾರಿ ವರ್ಗದವರೊಂದಿಗೆ ಕೈಜೋಡಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗುವಂತೆ ನಡೆದುಕೊಳ್ಳುವುದು ತಪ್ಪು. ಒಟ್ಟಾರೆ ಅಧಿಕಾರಿ ವರ್ಗದವರ ಶ್ರೀರಕ್ಷೆಯಲ್ಲಿ ಸಿಗಡಿ ಸಾಕಣಾ ಕೇಂದ್ರ ನಡೆಯುತ್ತಿದ್ದು, ಸಿಗಡಿ ಸಾಕಣಾ ಕೇಂದ್ರವನ್ನು ಸ್ಥಗಿತಮಾಡಬೇಕೆನ್ನುವುದು ಸ್ಥಳಿಯರ ಆಗ್ರಹವಾಗಿದೆ.