ಯಾರಿಗೆ ತಾನೇ ಕಾಯಿಲೆ ಬೀಳಲು ಇಷ್ಟ ಹೇಳಿ? ‘ಕಾಯಿಲೆ’ ಎಂಬ ಪದ ಕೇಳಿದ ತಕ್ಷಣ ಕಷ್ಟದ ಪರಿಸ್ಥಿತಿ ಮತ್ತು ವಿಪರೀತ ಖರ್ಚು ಮನಸ್ಸಿಗೆ ಬರಬಹುದು. ಕಾಯಿಲೆ ಬಂದಾಗ ಶಾಲೆಗೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ, ಹಣ ಸಂಪಾದಿಸಲು ಆಗುವುದಿಲ್ಲ, ಮನೆ ಜವಾಬ್ದಾರಿ ನೋಡಿಕೊಳ್ಳಲೂ ಆಗುವುದಿಲ್ಲ. ಜೊತೆಗೆ ಕಾಯಿಲೆ ಬಿದ್ದವರನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗಬಹುದು. ಚಿಕಿತ್ಸೆಗೆ, ಔಷಧಿಗಳಿಗೆ ಹಣ ಸುರಿಯಬೇಕು. ಒಟ್ಟಾರೆ ಕಾಯಿಲೆ ಅನ್ನುವುದು ನಮ್ಮ ಶತ್ರು.
ಕಾಯಿಲೆ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಆ ಕಾಯಿಲೆ ಬರದಂತೆ ಮೊದಲೇ ಜಾಗ್ರತೆ ವಹಿಸುವುದು ಒಳ್ಳೆಯದು ಅಂತ ಎಲ್ಲರೂ ಹೇಳುತ್ತಾರೆ. ನಾವು ಏನು ಮಾಡಿದರೂ ಕೆಲವು ಕಾಯಿಲೆಗಳನ್ನು ತಡೆಯಲು ಆಗುವುದಿಲ್ಲ. ಆದರೆ ನಾವು ಮೊದಲೇ ಜಾಗ್ರತೆ ವಹಿಸಿದರೆ ಅನೇಕ ಕಾಯಿಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.
ಶುದ್ಧತೆ ಕಾಪಾಡಿಕೊಳ್ಳಿ
“ನಮಗೆ ಕಾಯಿಲೆ ಬರಬಾರದು ಅಂದರೆ ಮತ್ತು ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಾರದು ಅಂದರೆ ನಾವೆಲ್ಲರೂ ನಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು” ಎಂದು ಅಮೆರಿಕದ ಪ್ರಸಿದ್ಧ ಆರೋಗ್ಯ ಸಂಸ್ಥೆ ಹೇಳುತ್ತದೆ. ಸಾಮಾನ್ಯವಾಗಿ ನಮ್ಮ ಕೈಗಳಲ್ಲಿ ರೋಗಾಣುಗಳಿರುತ್ತವೆ. ಇವು ಕಣ್ಣಿಗೆ ಕಾಣಿಸುವುದಿಲ್ಲ. ಆದ್ದರಿಂದ, ಕೈ ತೊಳೆಯದೆ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ, ನೆಗಡಿ, ಜ್ವರ ಬರುತ್ತದೆ. ಈ ಅಪಾಯದಿಂದ ದೂರವಿರಬೇಕಾದರೆ ನಾವು ಆಗಿಂದಾಗ್ಗೆ ನಮ್ಮ ಕೈ ತೊಳೆದುಕೊಳ್ಳುತ್ತಾ ಇರಬೇಕು. ಈ ರೀತಿ ಶುದ್ಧತೆ ಕಾಪಾಡಿಕೊಳ್ಳುವುದರಿಂದ ನ್ಯುಮೋನಿಯ ಮತ್ತು ಭೇದಿಯಂತಹ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದು. ಈ ಕಾಯಿಲೆಗಳಿಂದಾಗಿ ಪ್ರತಿ ವರ್ಷ 5 ವರ್ಷದೊಳಗಿನ ಸುಮಾರು 20 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಕೈ ತೊಳೆಯುವುದು ಚಿಕ್ಕ ವಿಷಯ ಅಂತ ನಮಗನಿಸಬಹುದು, ಆದರೆ ಅದನ್ನು ಪಾಲಿಸಿದರೆ ಎಬೋಲದಂತಹ ಪ್ರಾಣಾಪಾಯ ತರುವಂಥ ರೋಗಗಳನ್ನೂ ಹರಡದಂತೆ ತಡೆಯಬಹುದು.
ನಾವು ಈ ಕೆಳಗಿನ ಸಂದರ್ಭಗಳಲ್ಲಂತೂ ಕೈಗಳನ್ನು ತೊಳೆಯಲೇಬೇಕು:
-
ಶೌಚಾಲಯಕ್ಕೆ ಹೋಗಿ ಬಂದ ನಂತರ
-
ಮಗುವಿನ ಡೈಪರ್ ಬದಲಾಯಿಸಿದ ನಂತರ ಮತ್ತು ಶೌಚಾಲಯಕ್ಕೆ ಹೋಗಲು ಮಗುವಿಗೆ ಸಹಾಯಮಾಡಿದ ನಂತರ
-
ಗಾಯಕ್ಕೆ ಔಷಧಿ ಹಚ್ಚುವ ಮುಂಚೆ ಮತ್ತು ನಂತರ
-
ಕಾಯಿಲೆ ಬಿದ್ದವರನ್ನು ಭೇಟಿಯಾಗುವ ಮುಂಚೆ ಮತ್ತು ನಂತರ
-
ಆಹಾರವನ್ನು ತಯಾರಿಸುವ, ಬಡಿಸುವ ಮತ್ತು ತಿನ್ನುವ ಮುಂಚೆ
-
ಕೆಮ್ಮಿದ, ಸೀನಿದ ಮತ್ತು ಮೂಗನ್ನು ಒರೆಸಿಕೊಂಡ ನಂತರ
-
ಪ್ರಾಣಿಯನ್ನು ಅಥವಾ ಪ್ರಾಣಿಯ ತ್ಯಾಜ್ಯವನ್ನು ಮುಟ್ಟಿದ ನಂತರ
-
ಕಸ ಎಸೆದ ನಂತರ
ಕೈ ತೊಳೆಯುವುದನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ಎಷ್ಟೋ ಜನ ತಮ್ಮ ಕೈ ತೊಳೆದುಕೊಳ್ಳುವುದೇ ಇಲ್ಲ ಅಥವಾ ಸರಿಯಾಗಿ ತೊಳೆದುಕೊಳ್ಳುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಹಾಗಾದರೆ ನಮ್ಮ ಕೈಯನ್ನು ಹೇಗೆ ತೊಳೆಯಬೇಕು?
-
ಶುದ್ಧ ನೀರಿನಲ್ಲಿ ಕೈಯನ್ನು ಒದ್ದೆ ಮಾಡಿಕೊಂಡು ಸೋಪು ಹಚ್ಚಿರಿ.
-
ನೊರೆ ಬರುವವರೆಗೆ ಕೈಯನ್ನು ಚೆನ್ನಾಗಿ ಉಜ್ಜಿರಿ. ಉಗುರುಗಳನ್ನು, ಹೆಬ್ಬೆರಳುಗಳನ್ನು, ಕೈ ಹಿಂಭಾಗವನ್ನು ಮತ್ತು ಬೆರಳುಗಳ ಮಧ್ಯ ಭಾಗವನ್ನೂ ಶುಚಿ ಮಾಡಿಕೊಳ್ಳಿ.
-
ಕನಿಷ್ಠ ಪಕ್ಷ 20 ಸೆಕೆಂಡುಗಳವರೆಗೆ ನಿಮ್ಮ ಕೈಗಳನ್ನು ಉಜ್ಜುತ್ತಾ ಇರಿ.
-
ನಂತರ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ಕೈ ತೊಳೆದುಕೊಳ್ಳಿ.
-
ಕೈಯನ್ನು ಶುದ್ಧವಾದ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್‌ನಿಂದ ಒರೆಸಿಕೊಳ್ಳಿ.
ಈ ಮೇಲಿನ ಹೆಜ್ಜೆಗಳು ಸರಳವಾದರೂ ಅವುಗಳನ್ನು ಪಾಲಿಸುವುದಾದರೆ ಕಾಯಿಲೆಗಳಿಂದ ದೂರವಿದ್ದು ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳುತ್ತೇವೆ.