ವಿಧಾನ ಪರಿಷತ್‌:ಮಠ ಹಾಗೂ ಮಠದ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಸಂಬಂಧ ಸಾರ್ವಜನಿಕ ಅಭಿಪ್ರಾಯ ಪಡೆಯಲು ಹೊರಡಿಸಿದ್ದ ವಿವಾದಿತ ಸುತ್ತೋಲೆ ವಾಪಸ್‌ ಪಡೆಯಲಾಗಿದೆ.

ಪರಿಷತ್‌ನಲ್ಲಿ ಪ್ರತಿಪಕ್ಷ ಬಿಜೆಪಿ ನಿಲುವಳಿ ಸೂಚನೆ ಮಂಡಿಸುವ ಮೊದಲೇ ಈ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಯಾವುದೇ ಮಠಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಆಲೋಚನೆ ಹೊಂದಿಲ್ಲ. ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಸಾರ್ವಜನಿಕ ಅಭಿಪ್ರಾಯ ಪಡೆಯಲು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಅದನ್ನೂ ಈಗ ವಾಪಸ್‌ ಪಡೆಯಲಾಗಿದೆ ಎಂದು ಹೇಳಿದರು.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಮಠಗಳನ್ನು ಮಾತ್ರ ಸರ್ಕಾರ ನೋಡಿಕೊಳ್ಳುತ್ತದೆ. 2006 ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ಆದೇಶದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಪ್ರಕಟಣೆ ಹೊರಡಿಸಿದ್ದಾರೆ. ಆ ರೀತಿಯ ಅಭಿಪ್ರಾಯ ಕೇಳಿರುವುದು ಸರಿಯಲ್ಲ ಎಂದು ವಾಪಸ್‌ ಪಡೆಯಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಸರ್ಕಾರ ಈ ರೀತಿಯ ಆಲೋಚನೆ ಮಾಡಿರುವುದೇ ಹಿಂದೂಗಳಿಗೆ ಅಪಮಾನ ಮಾಡಿದಂತೆ. ಮಠಗಳು, ಸ್ವಾಮೀಜಿಗಳು ಎಂದರೆ ದೇವರಿದ್ದಂತೆ, ಸರ್ಕಾರ ಮಾಡದಿರುವ ಅನೇಕ ಸೇವೆಗಳನ್ನು ಮಠಗಳು ಮಾಡುತ್ತಿವೆ. ಅವುಗಳನ್ನು ಸರ್ಕಾರದ ವ್ಯಾಪ್ತಿಗೆ ತೆಗೆದುಕೊಳ್ಳುವ ಆಲೋಚನೆ ಮಾಡಿ ಹಿಂದೂಗಳಿಗೆ ಮತ್ತು ಮಠಾಧೀಶರಿಗೆ ಆಘಾತ ಉಂಟು ಮಾಡಿದ್ದೀರಿ, ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸರ್ಕಾರ ಪ್ರಕಟಣೆ ವಾಪಸ್‌ ತೆಗೆದುಕೊಂಡ ಮೇಲೆ ಚರ್ಚೆಗೆ ಆಸ್ಪದ ಕೊಡಬಾರದು ಎಂದು ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು.

RELATED ARTICLES  ಸರ್ಕಾರಕ್ಕೆ ಗೋಕರ್ಣದ ಕುರಿತು ಈ ಪರಿ ತರಾತುರಿಯ ನಡೆ ಅಗತ್ಯವಿತ್ತೇ?

ಆದರೆ, ಪ್ರತಿಪಕ್ಷದ ನಾಯಕ ಕೆ. ಎಸ್‌. ಈಶ್ವರಪ್ಪ ಸರ್ಕಾರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ನ್ಯಾಯಾಲಯ ಆದೇಶ ನೀಡಿ ಸಾಕಷ್ಟು ದಿನ ಆಗಿದೆ. ಈಗ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿರುವುದೇಕೆ. ಇಷ್ಟು ದಿನ ಮಲಗಿಕೊಂಡಿದ್ದೀರಾ ಎಂದು ಮುಖ್ಯಮಂತ್ರಿಯವರನ್ನು ಕೆಣಕಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, 2007 ಮಾರ್ಚ್‌ 1 ರಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೋರ್ಟ್‌ ಆದೇಶದಂತೆ ನ್ಯಾಯಮೂರ್ತಿ ರಾಮಾಜೋಯಿಸ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಂದರ್ಭದಲ್ಲಿಯೂ ಇದೇ ರೀತಿ ಸಾರ್ವಜನಿಕರ ಅಭಿಪ್ರಾಯ ಕೇಳಲಾಗಿತ್ತು. ಆವಾಗ ಯಾವ ಮಠಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದೀರಿ ಎಂದು ತಿರುಗೇಟು ನೀಡಿದರು. ಬಿಜೆಪಿಯವರೇನು ಹಿಂದೂಗಳ ಗುತ್ತಿಗೆ ಪಡೆದುಕೊಂಡಿದ್ದಾರಾ. ನಾನೂ ಹಿಂದೂನೇ ಎಂದು ತಿರುಗೇಟು ನೀಡಿದರು.

RELATED ARTICLES  #BeefFest ಗೆ ಪ್ರತಿಯಾದ #BeliefFest

ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ, ರಾಮಾಜೋಯಿಸ್‌ ಸಮಿತಿ ಸುತ್ತೋಲೆಗೂ ಸರ್ಕಾರದ ಸುತ್ತೋಲೆಗೂ ವ್ಯತ್ಯಾಸ ಇದೆ. ಇಲ್ಲಿ ಸರ್ಕಾರವೇ ಮಠಗಳನ್ನು ವ್ಯಾಪ್ತಿಗೆ ಪಡೆಯುವ ಹುನ್ನಾರ ನಡೆಸಿದೆ. ಸರ್ಕಾರ ಹಿಂದೂಗಳ ವಿಷಯದಲ್ಲಿ ಭಂಡತನ ತೋರುತ್ತಿದೆ. ಇದು ತುಘಲಕ್‌ ಸರ್ಕಾರ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ ಡಿ.ಎಚ್‌.ಶಂಕರ ಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುತ್ತೋಲೆ ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿರುವುದರಿಂದ ಈ ವಿಷಯದ ಮೇಲೆ ಚರ್ಚೆ ಅಗತ್ಯವಿಲ್ಲ ಎಂದು ಬಿಜೆಪಿಯ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು.

ಸರ್ಕಾರದ ಹೇಳಿಕೆಯಿಂದ ತೃಪ್ತರಾಗದ ಪ್ರತಿಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡಿದೆ. ಈ ಸರ್ಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ. ಸರ್ಕಾರದ ಈ ತೀರ್ಮಾನವನ್ನು ಖಂಡಿಸಿ ಸಭಾತ್ಯಾಗ ಮಾಡುವುದಾಗಿ ಹೇಳಿ ಸಭಾತ್ಯಾಗ ಮಾಡಿದರು. ಜೆಡಿಎಸ್‌ ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿ ಸಭಾತ್ಯಾಗ ಮಾಡಿತು.