ಮಂಗಳೂರು/ ಉಡುಪಿ: ಚುನಾವಣಾ ಕಣದಲ್ಲಿ ತನ್ನದೇ ಆದ ರಾಜಕೀಯ ಸೂತ್ರ ಹಾಗೂ ತಂತ್ರಗಾರಿಕೆ ರೂಪಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿಸ್ಸೀಮ. ವಿಧಾನಸಭೆ ಚುನಾ ವಣೆಯ ಚಟುವಟಿಕೆ ಗಳು ಗರಿಗೆದರುತ್ತಿರುವ ಹೊತ್ತಿನಲ್ಲಿ ಅವರು ಈಗ ಕರಾವಳಿ ಭಾಗದತ್ತ ಮುಖ ಮಾಡಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಶಾ ಉಭಯ ಜಿಲ್ಲೆಗಳಲ್ಲಿ ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.
ಸದ್ಯದ ವೇಳಾಪಟ್ಟಿಯಂತೆ ಫೆ. 18, 19 ಮತ್ತು 20ರಂದು ಅಮಿತ್‌ ಶಾ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಎರಡೂ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಕರಾವಳಿ
ಯಲ್ಲೂ ಬಿಜೆಪಿಯ ಚುನಾವಣಪೂರ್ವ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಕರಾವಳಿ ಭಾಗದಲ್ಲಿ ಶಾ ಅವರ ಪ್ರಥಮ ರಾಜಕೀಯ ಸಭೆ ಇದಾಗಿದ್ದು, ಹೆಚ್ಚಿನ ಮಹತ್ವ ಪಡೆದುಕೊಳ್ಳಲಿದೆ. ರಾಜ್ಯ ಬಿಜೆಪಿ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಅಮಿತ್‌ ಶಾ ಆಗಮನ ವನ್ನು ಎದುರು ನೋಡುತ್ತಿದ್ದು, ಅಗತ್ಯ ಪೂರ್ವ ತಯಾರಿಗೆ ಮುಂದಾಗಿದ್ದಾರೆ.

ಶಾ 2016ರ ಆ. 21ರಂದು ಉಳ್ಳಾಲದಲ್ಲಿ ಆಯೋಜಿಸಿದ್ದ 70ನೇ ಸ್ವಾತಂತ್ರ್ಯ ಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಬಿಜೆಪಿ ಕಚೇರಿ ಸಮೀಪ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು. ಪಂಪ್‌ವೆಲ್‌ನಿಂದ ಉಳ್ಳಾಲಕ್ಕೆ ತಿರಂಗಾ ಯಾತ್ರೆ ರ್ಯಾಲಿಯಲ್ಲಿ ಸಾಗಿ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆ ಮಾಡಿದ್ದರು. ಬಳಿಕ ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ “ತಿರಂಗಾ ಯಾತ್ರೆ’ಯ ಬೃಹತ್‌ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಇದನ್ನು ರಾಜಕೀಯೇತರ ಸಭೆ ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸಿದ ಬಳಿಕ ಅಮಿತ್‌ ಶಾ ಪಾಲಿಗೆ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಮೊದಲ ಬಹಿರಂಗ ಸಭೆ.

RELATED ARTICLES  ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ತೇಜೋವಧೆಯ ಪ್ರಯತ್ನಗಳನ್ನು ಪ್ರತಿಬಂಧಿಸಿದ ನ್ಯಾಯಾಲಯ

ಫೆ. 18ರಂದು ದ. ಕ. ಜಿಲ್ಲೆಗೆ: ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಾ ಅವರು ಫೆ. 18ರಂದು ರಾತ್ರಿ 7.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ರಾತ್ರಿ 8ಕ್ಕೆ ವಿಮಾನ ನಿಲ್ದಾಣದ ಹೊರಗೆ ಅವರು 10 ನಿಮಿಷ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅವರು ರಾತ್ರಿ 10.30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡುವರು.

ಫೆ. 19ರಂದು ಬೆಳಗ್ಗೆ 8.30ಕ್ಕೆ ಕುಕ್ಕೆಯಲ್ಲಿ ದೇವರ ದರ್ಶನ ಪಡೆದು, 9 ಗಂಟೆಗೆ ಸುಬ್ರಹ್ಮಣ್ಯದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುವರು. ಬಳಿಕ ಪುತ್ತೂರಿಗೆ ತೆರಳಿ 10.30ರಿಂದ 11.30ರ ವರೆಗೆ ಪುತ್ತೂರು ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವರು. ಅನಂತರ ಬಂಟ್ವಾಳದಲ್ಲಿ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ “ನವಶಕ್ತಿ ಸಮಾವೇಶ’ವನ್ನು ಉದ್ದೇಶಿಸಿ ಭಾಷಣ ಮಾಡುವರು. ಅಲ್ಲಿಂದ ದುಷ್ಕರ್ಮಿಗಳಿಂದ ಕೊಲೆಯಾದ‌ ಕಾಟಿಪಳ್ಳದ ದೀಪಕ್‌ ರಾವ್‌ ಅವರ ಮನೆಗೆ ಭೇಟಿ ನೀಡುವರು. ಮುಂದೆ ಅಪರಾಹ್ನ 3.30ಕ್ಕೆ ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುವರು.

ಫೆ. 19-20 ಉಡುಪಿ ಭೇಟಿ: ಫೆ.19ರಂದು ಸಂಜೆ 5 ಗಂಟೆಗೆ ಮಲ್ಪೆಯಲ್ಲಿ ಮೀನುಗಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿರುವ ಅಮಿತ್‌ ಶಾ ಬಳಿಕ ಸಂಜೆ 7ಕ್ಕೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು. ಅಮಿತ್‌ ಶಾ ಉಪಸ್ಥಿತಿಯಲ್ಲಿ ಬಿಜೆಪಿಯ 2 ಸಭೆಗಳು ಉಡುಪಿಯಲ್ಲಿ ನಡೆಯಲಿವೆ. ಫೆ. 20ರ ಬೆಳಗ್ಗೆ 10 ಗಂಟೆಗೆ ಸಾಮಾಜಿಕ ಜಾಲತಾಣ ನಿರ್ವಹಿಸುವ ಪ್ರಮುಖರ ಸಭೆ, 11ಕ್ಕೆ ಮಂಗಳೂರು ಮತ್ತು ಶಿವಮೊಗ್ಗ ವಿಭಾಗಗಳ ಆರು ಜಿಲ್ಲೆಗಳನ್ನು ಒಳಗೊಂಡಿರುವ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಅಮಿತ್‌ ಶಾ ಪಾಲ್ಗೊಂಡು ಮಾತನಾಡಲಿದ್ದಾರೆ.

RELATED ARTICLES  “ಸಾಲವನ್ನು ಮರು ಪಾವತಿ ಮಾಡುತ್ತೇನೆ”: ವಿಜಯ್ ಮಲ್ಯ ಟ್ವೀಟ್.!

ಉ.ಕ. ಭೇಟಿ: ಅನಂತರ ಹೊನ್ನಾವರಕ್ಕೆ ತೆರಳಿ ಇತ್ತೀಚೆಗೆ ಹತ್ಯೆಗೊಳಗಾದ ಪರೇಶ್‌ ಮೇಸ್ತ ಕುಟುಂಬ ಸದಸರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಅಲ್ಲದೆ ಕುಮಟಾದಲ್ಲಿ ಭಟ್ಕಳ, ಕುಮಟಾ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಅಲ್ಲಿಂದ ಶಿರಸಿಗೆ ತೆರಳಲಿರುವ ಶಾ, ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಹುಬ್ಬಳ್ಳಿಗೆ ತೆರಳಿ ಅಲ್ಲಿಂದ ದಿಲ್ಲಿಗೆ ವಾಪಸಾಗುವರು.

ಪ್ರಥಮ ರಾಜಕೀಯ ಸಭೆ: ಕಳೆದ ಅ. 3ರಂದು ಅಮಿತ್‌ ಶಾ ಮಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು, ಗಣ್ಯರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಆಯೋಜನೆಗೊಂಡಿದ್ದರೂ ಕೊನೆಯ ಕ್ಷಣ ರದ್ದುಗೊಂಡಿತ್ತು. ಕೇರಳಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಹಲವು ಬಾರಿ ಆಗಮಿಸಿದ್ದರು.

ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ: ಅಮಿತ್‌ ಶಾ ತಮ್ಮ ಫೆ. 18 ಮತ್ತು 19ರ ಪ್ರವಾಸದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆಯ ಗಾಳಿ ಆರಂಭಗೊಂಡಿದ್ದು, ಅಮಿತ್‌ ಶಾ ಅವರ ಪ್ರವಾಸ ಇಲ್ಲಿನ ಬಿಜೆಪಿ ನಾಯಕರು – ಕಾರ್ಯಕರ್ತರಲ್ಲಿ ಹೊಸ ಶಕ್ತಿಯನ್ನು ತುಂಬುವ ನಿರೀಕ್ಷೆ ಇದೆ. ಪ್ರವಾಸದ ವೇಳೆ ಅವರು ಪಕ್ಷದ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ವರಿಷ್ಠರ ಜತೆ ಸಮಾಲೋಚನೆ ನಡೆಸಿ ಕರಾವಳಿಯಲ್ಲಿ ಪಕ್ಷದ ಚುನಾವಣಾ ತಂತ್ರಗಳ ಕುರಿತು ಮಾರ್ಗದರ್ಶನ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.