ಧರ್ಮಸ್ಥಳ: ಮಹಾಶಿವರಾತ್ರಿಯ ವೇಳೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಬರುವ ಯಾತ್ರಾರ್ಥಿಗಳು ಗಮನಿಸಬೇಕಾದ ಮಹತ್ವದ ಪ್ರಕಟಣೆಯನ್ನು ದೇಗುಲದ ಆಡಳಿತ ಮಂಡಳಿ ಹೊರಡಿಸಿದೆ. ಫೆಬ್ರವರಿ ಏಳರಂದು ದೇಗುಲದ ಅಧಿಕೃತ ಫೇಸ್ ಬುಕ್ ಅಕೌಂಟಿನ ಮೂಲಕ ಭಕ್ತಾದಿಗಳಲ್ಲಿ ದೇವಾಲಯ ಮನವಿ ಮಾಡಿದ್ದು, ಪ್ರಮುಖವಾಗಿ ಪಾದಯಾತ್ರೆಯ ಮೂಲಕ ಧರ್ಮಸ್ಥಳ ದೇಗುಲಕ್ಕೆ ಬರುವ ಯಾತ್ರಾರ್ಥಿಗಳು ಈ ಪ್ರಕಟಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ.
ಮಹಾ ಶಿವರಾತ್ರಿಯಂದು (ಫೆ 13) ಮಂಜುನಾಥಸ್ವಾಮಿಯ ದರ್ಶನಕ್ಕಾಗಿ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ಭಕ್ತರು ಬರುವ ಪರಿಪಾಠ ಹಿಂದಿನಿಂದಲೂ ಇದೆ. ದೇವಾಲಯಕ್ಕೆ ಪಾದಯಾತ್ರೆಯ ಮೂಲಕ ಬರುವ ಯಾತ್ರಾರ್ಥಿಗಳು ಕಪ್ಪುಬಣ್ಣದ ಬಟ್ಟೆಯನ್ನು ಧರಿಸಿಕೊಂಡು ಬರಬಾರದು ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾದಯಾತ್ರೆಯಲ್ಲಿ ಬರುವ ಯಾತ್ರಾರ್ಥಿಗಳಿಗೆ ಬಿಸಿಲಿನ ತಾಪ ಹೆಚ್ಚಾಗದೇ ಇರಲು ಕಪ್ಪುಬಟ್ಟೆ ಧರಿಸದೇ ಇರುವುದು ವೈಜ್ಞಾನಿಕವಾಗಿ ಸೂಕ್ತ.