ಗೋಕರ್ಣ: ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಿ ಚುನಾವಣೆಯ ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ. ಇಂತಹ ಸಮಯದಲ್ಲಿ ‘ಅಹಿಂದ’ ನಿರ್ಣಾಯಕ ಪಾತ್ರ ನಿರ್ವಹಿಸುವ ಅಗತ್ಯವಿದೆ. ಈ ವಲಯದ ಕಾರ್ಯಕರ್ತರನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಬೇಕು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕಮಲಾಕರ ಗೋಕರ್ಣ ಹೇಳಿದರು. ಸಮೀಪದ ಭಾವಿಕೊಡ್ಲದಲ್ಲಿ ಈಚೆಗೆ ಅಂಕೋಲಾ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರದ ಅಹಿಂದ ಸಂಘಟನೆಯ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ‘ನಮ್ಮ ಸಂಘಟನೆಯನ್ನು ಪ್ರೋತ್ಸಾಹಿಸುವ ಪಕ್ಷಕ್ಕೆ ನಾವೆಲ್ಲ ಒಗ್ಗಟ್ಟಾಗಿ ಮತ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಮುಖರ ಸೂಚನೆಯ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ಬೆಂಬಲ ಘೋಷಿಸಿದೆ. ಅಂಕೋಲಾ ಮತ್ತು ಕಾರವಾರ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಶಾಸಕ ಸತೀಶ ಸೈಲ್ ಅವರ ಪರವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
ಶಾಸಕ ಸೈಲ್ ಮಾತನಾಡಿ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು. ಅಹಿಂದ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದ ಅವರು ಸಂಘಟನೆಯ ಕಾರ್ಯಕ್ರಮಗಳಿಗೆ ಎಲ್ಲ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ 300ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.