ವಾಷಿಂಗ್ಟನ್: ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಹದಿಹರೆಯದರಲ್ಲಿ ಹೆಣ್ಣು ಮಕ್ಕಳ ಮುಖದಲ್ಲಿ ಮೊಡವೆ ಮೂಡಿದಾಗ ಆತಂಕಕ್ಕೀಡಾಗುತ್ತಾರೆ. ಅದು ಮುಂದುವರಿದಂತೆ ಯುವತಿಯರು ತಮ್ಮ ಸೌಂದರ್ಯ ಹಾಳಾಗಿಬಿಡುತ್ತದೆ ಎಂದು ಖಿನ್ನತೆಗೆ ಒಳಗಾಗುತ್ತಾರೆ ಎನ್ನುತ್ತದೆ ಅಧ್ಯಯನವೊಂದು.
ಇಂಗ್ಲೆಂಡಿನ ಹೆಲ್ತ್ ಇಂಪ್ರೂವ್ ಮೆಂಟ್ ನೆಟ್ ವರ್ಕ್ ನಡೆಸಿದ ಅಧ್ಯಯನದಿಂದ ಇದು ತಿಳಿದುಬಂದಿದೆ.
ಹೆಣ್ಣು ಮಕ್ಕಳಲ್ಲಿ ಮೊಡವೆ ಕಾಣಿಸಿಕೊಂಡ ಒಂದು ವರ್ಷದೊಳಗೆ ಖಿನ್ನತೆಗೆ ಒಳಗಾಗುವ ಪ್ರಮಾಣ ಶೇಕಡಾ 63ರಷ್ಟಿರುತ್ತದೆ.ಮೊಡವೆಯಿಲ್ಲದವರಿಗೆ ಖಿನ್ನತೆ ಕಡಿಮೆಯಾಗಿರುತ್ತದೆ ಮತ್ತು ಮೊಡವೆ ಕಾಣಿಸಿಕೊಂಡು ಕೆಲವು ವರ್ಷಗಳ ನಂತರ ಅದು ಕಡಿಮೆಯಾಗುತ್ತಾ ಹೋಗುತ್ತದೆ.
ಮೊಡವೆ ಕಾಣಿಸಿಕೊಂಡ ಕೂಡಲೇ ಅದಕ್ಕೆ ಸೂಕ್ತ ಚಿಕಿತ್ಸೆ ಮಾಡಬೇಕು. ಇಲ್ಲದಿದ್ದರೆ ಖಿನ್ನತೆಗೆ ಒಳಗಾಗಬಹುದು. ಆಗ ಮನೋವೈದ್ಯರ ನೆರವು ಪಡೆಯಬೇಕಾಗುವುದು ಕೂಡ ಮುಖ್ಯ ಎನ್ನುತ್ತದೆ ಅಧ್ಯಯನ.
ಈ ಅಧ್ಯಯನ ಚರ್ಮ ರೋಗ ಮತ್ತು ಮಾನಸಿಕ ಕಾಯಿಲೆಗಳ ನಡುವಿನ ಸಂಬಂಧವನ್ನು ಉಲ್ಲೇಖಿಸುತ್ತದೆ. ಅಂದರೆ ವ್ಯಕ್ತಿಯ ಸೌಂದರ್ಯದಲ್ಲಿ ದೇಹದ ಚರ್ಮದ ಪಾತ್ರ ಕೂಡ ಮುಖ್ಯವಾಗಿರುತ್ತದೆ ಎನ್ನುತ್ತಾರೆ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಡಾ.ಇಸಬೆಲ್ಲೆ ವಲ್ಲೆರಂಡ್.
ಈ ಅಧ್ಯಯನ ಬ್ರಿಟನ್ ಪತ್ರಿಕೆ ಡರ್ಮಟೊಲಜಿಯಲ್ಲಿ ಪ್ರಕಟವಾಗಿದೆ.