ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಕಟ್ಟಾ ಅಭಿಮಾನಿಯೋರ್ವ ದರ್ಶನ್‌ ಅವರೊಂದಿಗೆ ಶುಕ್ರವಾರ ವಿಡಿಯೋಕಾಲ್‌ನಲ್ಲಿ ಮಾತನಾಡಿ ತಮ್ಮ ಕೊನೇ ಆಸೆ ತೀರಿಸಿಕೊಂಡು ಶನಿವಾರ ಮೃತಪಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಮೊಗ್ಗದ ರೇವಂತ್‌ ಮೃತಪಟ್ಟವರು. ದರ್ಶನ್‌ ಅವರ ಭಾರೀ ಅಭಿಮಾನಿಯಾದ ರೇವಂತ್‌ ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಮನೆಯವರಿಗೆ ಇದು ಗೊತ್ತಿದ್ದರೂ ರೇವಂತ್‌ ಅವರಿಗೆ ಮಾತ್ರ ಈ ವಿಷಯ ಮೊದಲಿಗೆ ತಿಳಿದಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಕಾಲು ನೋವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೇವಂತ್‌ಗೆ ತಿಳಿಸಲಾಗಿತ್ತು. ಐಟಿಐ ಮುಗಿಸಿದ ನಂತರ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ರೇವಂತ್‌, ಕಾಲು ನೋವು ಎಂದು ಶಿವಮೊಗ್ಗಕ್ಕೆ ವಾಪಸ್‌ ಬಂದಿದ್ದರು.

RELATED ARTICLES  ಜಿಲ್ಲೆಯ 11 ಕಡೆಗಳಲ್ಲಿ ಇಂದಿರಾ ಕ್ಯಾಂಟಿನ್! ನಡೆದಿದೆ ಯೋಜನೆ.

ವೈದ್ಯರ ಬಳಿ ಹೋದಾಗ ಮೂಳೆ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕುಟುಂಬದವರು ರೇವಂತ್‌ ಅವರಿಗೆ ಈ ವಿಷಯ ಗೊತ್ತಾಗದಂತೆ ನೋಡಿಕೊಂಡಿದ್ದರು. ದರ್ಶನ್‌ ಅವರ ಭಾರೀ ಅಭಿಮಾನಿಯಾದ ರೇವಂತ್‌ ಪ್ರತಿ ವರ್ಷ ದರ್ಶನ್‌ ಜನ್ಮದಿನದಂದು ಬೆಂಗಳೂರಿಗೆ ತೆರಳಿ ಶುಭಾಶಯ ಕೋರುತ್ತಿದ್ದರು.

ಈ ವರ್ಷ ಫೆ. 16 ರಂದು ನೆಚ್ಚಿನ ನಟನಿಗೆ ಜನ್ಮ ದಿನದ ಶುಭಾಶಯ ಕೋರಲು ಬೆಂಗಳೂ ರಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲಿದ್ದರು. ತಾವು ದರ್ಶನ್‌ ಅವರೊಂದಿಗೆ ಮಾತನಾಡಬೇಕೆಂದು ಹಠ ಹಿಡಿದರು. ವಿಷಯ ತಿಳಿದ ದರ್ಶನ್‌ ಶುಕ್ರವಾರ ಸ್ನೇಹಿತರ ಮೊಬೈಲ್‌ಗೆ ವಿಡಿಯೋ ಕಾಲ್‌ ಮಾಡಿ ರೇವಂತ್‌ ಮತ್ತು ಆತನ ತಾಯಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದರು.

RELATED ARTICLES  ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಮಾತ್ರಕ್ಕೆ ಅಭ್ಯರ್ಥಿ ಟಿಕೆಟ್ ಫೈನಲ್ ಅಲ್ಲ:ಈಶ್ವರಪ್ಪ ಟಾಂಗ್

ಶೀಘ್ರದಲ್ಲೇ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆಂದು ಹೇಳಿದ್ದರು. ದರ್ಶನ್‌ ಅವರೊಂದಿಗೆ ಮಾತನಾಡುವ ವೇಳೆಯಲ್ಲಿ ರೇವಂತ್‌ ಅವರಿಗೆ ಕ್ಯಾನ್ಸರ್‌ ಇರುವ ವಿಷಯ ತಿಳಿಸಬೇಡಿ ಎಂದು ಮುಂಚಿತವಾಗಿಯೇ ಮನವಿ ಮಾಡಲಾಗಿತ್ತು. ನೆಚ್ಚಿನ ನಟನೊಂದಿಗೆ ಮಾತನಾಡಿದ ಬಳಿಕ ರೇವಂತ್‌ ಖುಷಿಯಾಗಿದ್ದರು. ಆದರೆ ತಮ್ಮ ಆಸೆ ತೀರಿಸಿಕೊಂಡ ರೇವಂತ್‌ ಶನಿವಾರ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.