ಕಾರವಾರ: ತಾಲೂಕಿನ ಶೇಜವಾಡದಲ್ಲಿರುವ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.13 ರಿಂದ ಫೆ.17ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಫೆ.13 ರಂದು ಮಹಾಶಿವರಾತ್ರಿ ನಿಮಿತ್ತ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಶ್ರೀ ಶೆಜ್ಜೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಪೂಜೆ, ಆರತಿ ಪ್ರಸಾದ ವಿತರಣೆ, ಹಣ್ಣು ಕಾಯಿ ಸೇವೆಗಳು ನಡೆಯಲಿವೆ. ಸಂಜೆ 7 ಗಂಟೆಗೆ ಶ್ರೀ ಶೆಜ್ಜೇಶ್ವರ ಭಜನ ಮಂಡಳಿಯವರಿಂದ ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ.
ಫೆ.14 ರಂದು ರಾತ್ರಿ 8 ಗಂಟೆಗೆ ಪಲ್ಲಕ್ಕಿ ಮೆರವಣಿಗೆ, ಆರತಿ, ಪೂಜೆ ಹಾಗೂ ಪ್ರಸಾದ ವಿತರಣೆಗಳು ನಡೆಯಲಿವೆ. ಫೆ.15 ರಂದು ಬೆಳಿಗ್ಗೆ 7 ಗಂಟೆಗೆ ದೇವರ ಪಲ್ಲಕ್ಕಿಯು ಸಮುದ್ರ ಸ್ನಾನಕ್ಕೆ ತೆರಳಲಿದೆ. ಮಧ್ಯಾಹ್ನ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಪಲ್ಲಕ್ಕಿ ಮೆರವಣಿಗೆ, ಪೂಜೆ ಹಾಗೂ ರಾತ್ರಿ 8.30ಕ್ಕೆ ಅಷ್ಟಾವರ್ಧಾನ ಸೇವೆ ಪ್ರಸಾದ ವಿತರಣೆ ನಡೆಯಲಿದೆ.
ಫೆ.16 ರಂದು ಮಧ್ಯಾಹ್ನ 2 ಗಂಟೆಗೆ ಹೋಮ ಹವನ, ಸಂಜೆ 5 ಗಂಟೆಗೆ ರಥಾರೋಹಣ, ಶ್ರೀ ದೇವರ ದರ್ಶನ, ಪೂಜೆಗಳು ನಡೆಯಲಿವೆ. ರಾತ್ರಿ 10 ಗಂಟೆಗೆ ಪಂಚವಾದ್ಯಗಳೊಂದಿಗೆ ಹಿಲಾಮತಿ ಮೆರವಣಿಗೆ ನಡೆಯಲಿದೆ. ಇದೇ ವೇಳೆ ಇಲ್ಲಿನ ರಂಗ ಮಂಟಪದಲ್ಲಿ ಸ್ಥಳೀಯ ಕಲಾವಿದರಿಂದ ಭವಾನಿ ಪ್ರತಾಪ ಎಂಬ ಮರಾಠಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ.17ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ದೇವರ ರಥೋತ್ಸವ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ದೇವರ ಅವಭೃತ ಸ್ನಾನ(ಓಕುಳಿ), ಪಲ್ಲಕ್ಕಿ ಮೆರವಣಿಗೆ, ಪೂಜೆ ಪ್ರಸಾದ ವಿತರಣೆ ನಡೆಯಲಿವೆ. ಸಂಜೆ 7 ಗಂಟೆಗೆ ಶ್ರೀ ಶೆಜ್ಜೇಶ್ವರ ಯುವಕ ಮಂಡಳ ಇವರ ಸಹಕಾರದೊಂದಿಗೆ ಕಾರವಾರ-ಅಂಕೋಲಾ ತಾಲೂಕು ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.
ಈ ಎಲ್ಲ ಕಾರ್ಯಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೋತ್ಸವವನ್ನು ಯಶಸ್ವಿಗೊಳಿಸ ಬೇಕು ಎಂದು ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ(ಹಿಂದೂ ಧಾರ್ಮಿಕ ದತ್ತಿ ಇಲಾಖೆ) ಅಧ್ಯಕ್ಷ ಜಯಪ್ರಕಾಶ ಜಿ.ಕೆ.ರಾಮ ಹಾಗೂ ಸರ್ವ ಸದಸ್ಯರು ಕೋರಿದ್ದಾರೆ.