ಗೋಕರ್ಣ:ಇಲ್ಲಿನ ಮೂಲೇಕೇರಿಯ ಶ್ರೀ ಜೈನ ಜಟಕ ಯುವಕ ಸಂಘ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ 10 ನೇ ವರ್ಷದ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನೆ, ಸನ್ಮಾನ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಶ್ರೀ ಜೈನ ಜಟಕ ದೇವಸ್ಥಾನದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಯುವ ಮುಖಂಡ ರವಿಕುಮಾರ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಜೈನ ಜಟಕ ಯುವಕ ಸಂಘದವರು ಊರವರ ಸಹಕಾರದೊಂದಿಗೆ ಕಳೆದ 10 ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವುದು ಶ್ಲಾಘನೀಯ ಎಂದರು.
ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡುತ್ತಾ ಜೈನ ಜಟಕ ಯುವಕ ಸಂಘದವರು ಕ್ರೀಡೆ, ಮನರಂಜನೆ ಕಾರ್ಯಕ್ರಮಗಳೊಂದಿಗೆ ಸಮಾಜದಲ್ಲಿನ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕೂಡಾಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಹಾಲಕ್ಕಿ ಸಮಾಜದವರು ಇತ್ತೀಚಿನ ದಿನಗಳಲ್ಲಿ ಉತ್ತಮ ಸಂಘಟನೆಯೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯ ಪ್ರತಿಯೊಬ್ಬರಿಗೂ ಕ್ರೀಡೆ ಮತ್ತು ಮನರಂಜನೆ ಅತ್ಯಗತ್ಯವಾಗಿದೆ. ಮನರಂಜನೆ ಮನಸ್ಸಿಗೆ ಮುದ ನೀಡಿದರೆ ಕ್ರಿಡೆಗಳು ಮನರಂಜನೆಯೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತವೆ. ಮಕ್ಕಳಿಗೆ ಬಾಲ್ಯದಲ್ಲೇ ಶಿಕ್ಷಣದೊಂದಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಮನೋಭಾವನೆಯನ್ನು ಬೆಳೆಸಬೇಕು. ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹಿಸುತ್ತಿರುವುದು ಸುಸಂಸ್ಕøತ ಸಮಾಜದ ಆದ್ಯ ಕರ್ತವ್ಯವಾಗಿದೆ. ಇಳಿ ವಯಸ್ಸಿನಲ್ಲೂ ಇಷ್ಟೊಂದು ಚಟುವಟಿಕೆಯಿಂದಿರುವ ಪದ್ಮಶ್ರೀ ಪುರಸ್ಕøತರಾದ ಸುಕ್ರಿ ಬೊಮ್ಮ ಗೌಡ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಈ ಸಮಾಜದಿಂದ ಇನ್ನಷ್ಟು ಪ್ರತಿಭೆಗಳು ಹೊರಹೊಮ್ಮಿ ಅವರು ರಾಜ್ಯ ಮಟ್ಟದಲ್ಲಿ ಬೆಳಗುವಂತಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪದ್ಮಶ್ರೀ ಪುರಸ್ಕøತರಾದ ಸುಕ್ರಿ ಬೊಮ್ಮ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ತುಳಸಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಾ ಹಾಲಕ್ಕಿ ಒಕ್ಕಲಿಗರ ಸಮಾಜದ ಗೋವಿಂದ ನಾಗಪ್ಪ ಗೌಡ ಅವರು ವಹಿಸಿ ಅಧ್ಯಕ್ಷೀಯ ಬಾಷಣ ಮಾಡಿದರು.
ಬಹುಮಾನ ಫಲಕದ ಉದ್ಘಾಟಕರಾಗಿ ಆಗಮಿಸಿದ ಬಿಜೆಪಿ ಪ್ರಮುಖ ಸೂರಜ ನಾಯ್ಕ ಸೋನಿ, ಗೌರವಾಧ್ಯಕ್ಷತೆ ವಹಿಸಿದ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ, ಜಿ. ಪಂ. ಸದಸ್ಯೆ ಗಾಯತ್ರಿ ಗೌಡ ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತೊರ್ಕೆ ಗ್ರಾ. ಪಂ. ಅಧ್ಯಕ್ಷರಾದ ಸುಮಿತ್ರಾ ಗೌಡ, ರಾಜೀವ ಗಾಂವಕರ, ವೆಂಕಟ್ರಮಣ ಆರ್. ಕವರಿ, ಅರುಣ ಗೌಡ, ನಾರಾಯಣ ನಾಯ್ಕ, ಅರುಣ ಕವರಿ ಹಾಗೂ ನಾಗೇಶ ಎಚ್. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.