ಕುಮಟಾ: ಶೈಕ್ಷಣಿಕ ವರ್ಷವು ಮುಗಿಯುತ್ತಾ ಬಂದರೂ ಸಹಿತ ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರಿಗೆ ಸಂಬಳವನ್ನು ನೀಡದೇ ಸತಾಯಿಸುತ್ತಿದೆ ಎಂದು ಬಿಜೆಪಿ ಮುಖಂಡ ಸೂರಜ ನಾಯ್ಕ ಸೊನಿ ಆರೋಪಿಸಿದ್ದಾರೆ.
ಕುಮಟಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಯ 10 ಅತಿಥಿ ಶಿಕ್ಷಕರಿಗೆ ಹಾಗೂ ಪ್ರೌಢಶಾಲಾ ವಿಭಾಗದ 2 ಅತಿಥಿ ಶಿಕ್ಷಕರಿಗೆ ಶೈಕ್ಷಣಿಕ ವರ್ಷದಿಂದ ಪ್ರಾರಂಭದಿಂದಲೇ ಸಂಬಳವನ್ನು ನೀಡಿಲ್ಲ. ಮಕ್ಕಳಿಗೆ ಶಿಕ್ಷಣವನ್ನು ನೀಡಲು ಅತಿಥಿ ಶಿಕ್ಷಕರಾಗಿ ದುಡಿದವರಿಗೆ ತಮ್ಮ ಸಂಬಳದಲ್ಲಿ ಊಟ ಮಾಡದಂತೆ ಮಾಡಿದ್ದಾರೆ. ಶಾಲೆಯಲ್ಲಿ ದಿನಪೂರ್ತಿ ದುಡಿದರೂ, ಊಟ ಮಾತ್ರ ಮನೆಯವರ ಹಣದಲ್ಲಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹುದ್ದೆಗೆ ನಿರುದ್ಯೋಗಿ ಹಾಗೂ ಕಷ್ಟದಲ್ಲಿದ್ದವರು ಈ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಕಷ್ಟದಲ್ಲಿರುವ ಇಂತಹ ಕುಟುಂಬಕ್ಕೆ ಸಂಬಳವನ್ನು ನೀಡದೇ ಇರುವುದರಿಂದ ಈ ಕುಟುಂಬವು ಇನ್ನಷ್ಟು ಕಷ್ಟದಲ್ಲಿ ಸಿಲುಕಿದೆ ಎಂದು ಆರೋಪಿಸಿದ್ದಾರೆ.
ಪರಿಸ್ಥಿತಿ ಹೀಗೆ ಮುಂದುವರೆದರೆ ಈ ಎಲ್ಲಾ ಅತಿಥಿ ಶಿಕ್ಷಕರು ಜೀವನ ನಡೆಸುವುದು ಹೇಗೆ? ಇಂತಹ ಕುಟುಂಬಗಳು ಬೀದಿಗೆ ಬರುವ ಮೊದಲೇ ಎಲ್ಲಾ ಅತಿಥಿ ಶಿಕ್ಷಕರಿಗೂ ಸಂಬಳವನ್ನು ನೀಡಬೇಕು. ಇಲ್ಲವಾದಲ್ಲಿ ಅವರ ಪರವಾಗಿ ನಿಂತು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಎಲ್ಲಾ ಸಮಸ್ಯೆಯನ್ನೂ ಗಮನಿಸಿಯೂ ಸುಮ್ಮನೇ ಕುಳಿತಿರುವ ಶಾಸಕರ ಕಾರ್ಯವೈಖರಿಯನ್ನು ಖಂಡಿಸಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗೂ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕಿ ಶಾರದಾ ಶೆಟ್ಟಿಯವರೇ ನೇರ ಜವಾಬ್ದಾರರು ಎಂದು ಆರೋಪಿಸಿದ್ದಾರೆ.