ಕಾರವಾರ:ನಿರ್ಗತಿಕ ವಿಧವಾ ವೇತನವನ್ನು 2,500ಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಭವಿಷ್ಯನಿಧಿ ವಂತಿಗೆದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಖ್ಯ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಜಿಲ್ಲೆಯಲ್ಲಿನ ನಿರ್ಗತಿಕ ವಿಧವೆಯರು 2012ರಿಂದ ಕೇವಲ 500 ಮಾಸಿಕ ವಿಧವಾ ವೇತನವನ್ನು ಪಡೆಯುತ್ತಿದ್ದಾರೆ. ಇಂದಿನ ದಿನಮಾನಗಳಲ್ಲಿ ದಿನೇ ದಿನೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ ಕಳೆದ 5 ವರ್ಷಗಳಿಂದ ಈ ವಿಧವಾ ವೇತನದಲ್ಲಿ ಒಂದು ರೂ. ಸಹ ಏರಿಕೆ ಮಾಡಿಲ್ಲ. ಇದರಿಂದ ನಿರ್ಗತಿಕ ವಿಧವೆಯರು ಜೀವನ ಸಾಗಿಸುವುದು ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.
ನೆರೆ ರಾಜ್ಯ ಗೋವಾದಲ್ಲಿ ಇದೇ ನಿರ್ಗತಿಕ ವಿಧವಾ ವೇತನವು 2,500 ಇದೆ. ಗೋವಾ ರಾಜ್ಯ ಸರ್ಕಾರ ಮಾಡಿರುವಂತೆ ನಮ್ಮಲ್ಲಿಯೂ ಅಷ್ಟೇ ವೇತನವನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನೌಕರರ ಭವಿಷ್ಯನಿಧಿ ವಂತಿಗೆದಾರರ ಮತ್ತು ಇಪಿಎಫ್ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬು ಅಂಬಿಗ, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಸಂಜಯ್ ಸಾಳುಂಕೆ ಹಾಜರಿದ್ದರು.