ಉತ್ತರ ಕನ್ನಡ : ಮಹಾಶಿವರಾತ್ರಿ ಹಿನ್ನೆಲೆ ಪ್ರಸಿದ್ಧ ಪೌರಾಣಿಕ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ಸನ್ನಿಧಾನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.
ರಾಜಾ ಭಗೀರಥ. ಪ್ರಹ್ಲಾದ ಮೊದಲಾದ ರಾಜರ್ಷಿಗಳ, ವ್ಯಾಸ ವಸಿಷ್ಠ ಮೊದಲಾದ ಮಹರ್ಷಿಗಳ ತಪೋಭೂಮಿಯಾಗಿದ್ದ ಸಿದ್ಧಿಕ್ಷೇತ್ರವಾದ ಗೋಕರ್ಣವು ಲೋಕಶಂಕರನಾದ ಶಿವನಿಗೂ ತಪಃಸ್ಥಳವಾಗಿತ್ತು. ಯುಗ, ಯುಗಗಳ ಪೂರ್ವದಲ್ಲಿ ಪರಶಿವನೂ ಸೃಷ್ಟಿಕಾರ್ಯವನ್ನುಕೈಗೊಳ್ಳಲು ತಪಸ್ಸನ್ನಾಚರಿಸಿದ ಪುಣ್ಯಭೂಮಿಯಾದ ಈ ಕ್ಷೇತ್ರ ಶ್ರೀರಾಮನ, ಆಂಜನೇಯನ ಜನನಕ್ಕೆ ಕಾರಣವಾದ ಪ್ರದೇಶವೂ ಹೌದು. ಇಂದು ಸಾರ್ವಭೌಮ ಮಹಾಬಲೇಶ್ವರನ ಆತ್ಮಲಿಂಗದಿಂದ ಭೂಷಿತವಾಗಿದ್ದರೂ ಅದಕ್ಕಿಂತ ಮೊದಲು ಇಲ್ಲಿ ಆರಾಧ್ಯನಾಗಿದ್ದವ ಆದಿಗೋಕರ್ಣ ಎಂಬ ಹೆಸರಿನಿಂದ ವಿಖ್ಯಾತನಾದ ಈಶ್ವರನೇ. ಹೀಗಾಗಿ ರಾವಣ, ಕುಂಭಕರ್ಣ ವಿಭೀಷಣರ ತಪಸ್ಸಿನ ನೆಲೆಯಾದ ಈ ಗೋಕರ್ಣದಲ್ಲಿ ರಾಮಾಯಣದ ಮಾರೀಚನ ಆಶ್ರಮವೂ ಇತ್ತು ಎಂದು ಇತಿಹಾಸವು ದಾಖಲಿಸಿದೆ.
ಇಂತಹ ಶಕ್ತಿ ಕೇಂದ್ರದಲ್ಲಿ ಶಿವನ ದರ್ಶನ ಪಡೆಯಲು ನಿನ್ನೆ ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿರುವ ಸಾವಿರಾರು ಭಕ್ತರು, ಆತ್ಮಲಿಂಗ ದರ್ಶನಕ್ಕೆ ಕಾತುರರಾಗಿದ್ದಾರೆ.ಇನ್ನು ಎಲ್ಲಾ ಭಕ್ತರಿಗೂ ಆತ್ಮಲಿಂಗವನ್ನು ಪೂಜಿಸುವ ಅವಕಾಶ ನೀಡಿದ ಆಡಳಿತ ಮಂಡಳಿ ದೇವಾಲಯದಲ್ಲಿ ಭಕ್ತರಿಗೆ ವಿಶೇಷ ಉಪಹಾರದ ವ್ಯವಸ್ಥೆಯನ್ನು ಮಾಡಿದೆ.
ಹಾಗೆ ಫೆಬ್ರವರಿ 16ರಂದು ಶ್ರೀಕ್ಷೇತ್ರದಲ್ಲಿ ಮಹಾರಥೋತ್ಸವ ನಡೆಯಲಿದ್ದು, ರಾಮಚಂದ್ರಪುರಾಮಠ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯ ವಹಿಸಲಿದ್ದಾರೆ.