ಕಾರವಾರ: ಪ್ರೇಮಿಗಳ ದಿನಕ್ಕೆ ಕೇವಲ ಒಂದು ದಿನ ಬಾಕಿ ಇದ್ದಂತೆಯೇ ಪ್ರೇಮದ ಸಂಕೇತವಾದ ಗುಲಾಬಿಯ ಬೆಲೆ ನಗರದಲ್ಲಿ ತುಸು ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ₹ 3ರಿಂದ ₹ 5ರವರೆಗೆ ಮಾರಾಟವಾಗುತ್ತಿದ್ದ ಗುಲಾಬಿ ದರ ಇಂದು ₹ 25ಕ್ಕೆ ದಿಢೀರನೆ ಏರಿಕೆ ಕಂಡಿದೆ.

ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲಿ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಪ್ರೇಮಿಗಳ ದಿನದಂದು ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಗುಲಾಬಿ ಮಾರಾಟವಾಗುತ್ತವೆ. ಅದಕ್ಕಾಗಿಯೇ ನಗರದೆಲ್ಲಡೆ ಗುಲಾಬಿ ಹೂವುಗಳ ಮಾರಾಟದ ಅಬ್ಬರ ಜೋರಾಗಿದೆ.

ಈ ಬಾರಿ ಗುಲಾಬಿ ತುಸು ದುಬಾರಿಯಾಗಿರುವುದು ಪ್ರೇಮಿಗಳಿಗೆ ಕೊಂಚ ಬಿಸಿ ತಾಗಿದರೂ, ವ್ಯಾಪಾರಕ್ಕೆ ಯಾವುದೇ ರೀತಿಯಲ್ಲೂ ಪೆಟ್ಟು ನೀಡುವುದಿಲ್ಲ ಎನ್ನುವುದು ವ್ಯಾಪಾರಿಗಳ ವಿಶ್ವಾಸ.

RELATED ARTICLES  ಗೋಕರ್ಣ: ಭಾರತೀಯ ಧಾರ್ಮಿಕತೆಗೆ ಮಾರುಹೋದ ವಿದೇಶಿಗರು

‘ಬೆಲೆ ಏರಿಕೆ ಪ್ರೇಮಿಗಳಲ್ಲಿ ತುಸು ನಿರಾಸೆ ಉಂಟಾಮಾಡಿದೆ. ಆದರೆ, ಪ್ರೀತಿಗೆ ಅಷ್ಟೊಂದು ಬೆಲೆ ಕೊಡುವಾಗ ಪ್ರೀತಿಯ ಸಂಕೇತವಾದ ಗುಲಾಬಿಗೆ ಎಷ್ಟು ಬೆಲೆ ಕೊಟ್ಟರೂ ಕಡಿಮೆಯೇ ಎಂಬುದು ಯುವ ಪ್ರೇಮಿಗಳ ನಿಲುವು. ಹೀಗಾಗಿಯೇ ಪ್ರೇಮಿಗಳ ದಿನದಂದು ಬೆಲೆ ದುಪ್ಪಟ್ಟು ಇರುತ್ತದೆ. ಫೆ.14ರಂದು ₹ 25ರಿಂದ ₹ 35ರವರೆಗೆ ಮಾರಾಟವಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಇಮ್ರಾನ್.

‘ಪ್ರೇಮಿಗಳ ದಿನ ಗುಲಾಬಿಯ ಖರೀದಿ ಹೆಚ್ಚಾಗುತ್ತದೆ. ದರ ಹೆಚ್ಚಿದ್ದರೂ ಕೂಡ ಪ್ರೇಮಿಗಳು ಪ್ರೀತಿಯ ನಿವೇದನೆ ಮಾಡಿಕೊಳ್ಳಲು ಅನಿವಾರ್ಯವಾಗಿ ಖರೀದಿಸುತ್ತಾರೆ. ಅದರಲ್ಲೂ, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಹೂವುಗಳನ್ನು ಕೊಂಡೊಯ್ಯುತ್ತಾರೆ’ ಎನ್ನುತ್ತಾರೆ ಅವರು.

RELATED ARTICLES  ಇಂದಿನ(ದಿ-20/02/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

‘ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗುಲಾಬಿ ಕೇವಲ ಅದರ ಸಂಕೇತವಷ್ಟೇ. ದುಬಾರಿಯಾದರೂ ಒಂದು ದಿನದ ಮಟ್ಟಿಗೆ ಪ್ರೇಯಸಿಗಾಗಿ ಖರೀದಿಸಿದರೆ ತಪ್ಪೇನಿಲ್ಲ ಬಿಡಿ’ ಎಂದು ಪ್ರತಿಕ್ರಿಯಿಸಿದರು ನವ ವಿವಾಹಿತ ನರೇಶ್.

‘ಪ್ರೇಮಿಗಳ ದಿನದಂದು ಹೋಲ್‌ ಸೇಲ್‌ ದರ ಎಂದಿನಂತೆ ಇರುತ್ತದೆ. ಗುಲಾಬಿ ಮಾಲೆಯ ದರಲ್ಲಿಯೂ ಅಷ್ಟೇನು ಏರಿಕೆಯಾಗುವುದಿಲ್ಲ. ಆದರೆ, ಬಿಡಿ ಹೂ ಮಾರುವ ವ್ಯಾಪಾರಿಗಳು ಮಾತ್ರ ದುಬಾರಿ ದರದಲ್ಲಿ ಮಾರುತ್ತಾರೆ’ ಎಂದು ಹೆಸರು ಹೇಳಲು ಬಯಸದ ಹೂವಿನ ವ್ಯಾಪಾರಿಯೊಬ್ಬರು ಹೇಳಿದರು.