ದಾಂಡೇಲಿ: ಕೊಂಕಣಿ ಭಾಷಿಕರು ಸಂಕೋಚವಿಲ್ಲದೇ ತಮ್ಮ ಭಾಷೆ ಮಾತನಾಡಬೇಕು. ಇಂಗ್ಲಿಷ್ ವ್ಯಾಮೋಹಕ್ಕಿಂತ ಕೊಂಕಣಿಗೆ ಮಹತ್ವ ನೀಡಬೇಕು ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹೇಳಿದರು.
ಮೂರು ದಿನಗಳಿಂದ ನಗರದ ರಂಗನಾಥ ಸಭಾಂಗಣದಲ್ಲಿ ನಡೆದ ದಂಡಕಾರಣ್ಯ ಕೊಂಕಣಿ ಮಾನ್ಯತೋತ್ಸವ 25ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿಶ್ವ ಕೊಂಕಣಿ ಕೇಂದ್ರ ಕೊಂಕಣಿ ಭಾಷಿಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲು ಸಿದ್ಧವಿದೆ. ಅರ್ಹ ವಿದ್ಯಾರ್ಥಿಗಳು ಇದರ ಲಾಭ ಪಡೆದು ಉನ್ನತ ಶಿಕ್ಷಣ ಪಡೆಯಬೇಕು’ ಎಂದರು.
ಕೊಂಕಣಿ ಭಾಷೆ ಸಾಹಿತ್ಯ ಮತ್ತು ಸಂಘಟನೆ ಕುರಿತು ಡಾ.ಪ್ರಭಾ ವಿ. ಭಟ್, ಡಾ.ಸರಯು ಎಲ್. ಪ್ರಭು, ಉದಯ ರಾಯ್ಕರ್, ಉಷಾ ನಾಯಕ್ ತಮ್ಮ ವಿಚಾರ ಮಂಡಿಸಿ ಯುವಜನರು ಕೊಂಕಣಿ ಭಾಷೆಯ ಕಲಿಕೆ ಹಾಗೂ ಅಭಿವೃದ್ಧಿ ಕುರಿತು ಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರ ವಿಶ್ವವಿದ್ಯಾಲಯದ ಕೊಂಕಣಿ ಪೀಠದ ಸಂಯೋಜಕ ಡಾ.ಜಯವಂತ ನಾಯ್ಕ ಮಾತನಾಡಿದರು. ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಆರ್.ಪಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೊಂಕಣಿ ಸಾಧಕರಿಗೆ, ಆರ್.ಪಿ ನಾಯ್ಕ ಹಾಗೂ ಪತ್ನಿ ಶ್ರೀಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.
ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು ಕುಂಬಳೆ, ಸಂತೋಷ ಶೆಣೈ, ದಯಾನಂದ್ ಪಾಂಡುಗೌಡ, ಮಾಧವ ಶೇಟ್, ರಾಮಾ ವಿ. ಮೇಸ್ತಾ, ದಾಮೋದರ್ ಭಂಡಾರಕರ್, ಸುಮಂಗಲ ಸದಾನಂದ ನಾಯಕ, ನಾಗೇಶ ಅಣ್ವೇಕರ್, ಮಾನ್ಯುವೆಲ್ ಸ್ಟೀಫನ್ ಎ. ರೊಡ್ರಿಗಸ್ ಹಾಗೂ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ಬಿ. ದೇವದಾಸ ಪೈ ಇದ್ದರು.