ಹೊನ್ನಾವರ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತಾಷಾ ಕಳೆದ ಡಿಸೆಂಬರ 8 ರಂದು ನಿಗೂಢವಾಗಿ ಸಾವನ್ನಪ್ಪಿದ ಹೊನ್ನಾವರದ ಪರೇಶ ಮೇಸ್ತನ ಮನೆಗೆ ಇದೆ ದಿನಾಂಕ 20 ರಂದು ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮದ ಮೂಲಕ ತಿಳಿದು ಬಂದಿದ್ದು ಅವರನ್ನು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಅವರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೊನ್ನಾವರ ಇತಿಹಾಸದಲ್ಲಿಯೇ ಎಂದು ನಡೆಯಬಾರದ ಘಟನೆ ಡಿಸೆಂಬರ 6 ರಂದು ನಡೆದು ಎರಡು ಕೋಮುಗಳಲ್ಲಿ ಘರ್ಷಣೆ ಸಂಭವಿಸಿ ಮತೀಯ ಸಾಮರಸ್ಯಕ್ಕೆ ಧಕ್ಕೆ ತಂದಿತ್ತು. ಈ ಸಂದರ್ಭದಲ್ಲಿ ಪರೇಶ ಮೇಸ್ತ ನಿಗೂಢವಾಗಿ ಸಾವನ್ನಪ್ಪಿ ಆತನ ಕಳೆಬರ ನಗರದ ಶೆಟ್ಟಿಕೆರೆಯಲ್ಲಿ ಡಿಸೆಂಬರ 8 ರಂದು ಸಂಶಯಾಸ್ಪದವಾಗಿ ಪತ್ತೆಯಾಗಿತ್ತು.
ಈ ಘಟನೆಯಿಂದ ಶಾಂತಿಪ್ರಿಯ ಹೊನ್ನಾವರದಲ್ಲಿ ಶಾಂತಿ ಕದಡಿತ್ತು. ಸಂಶಯಾಸ್ಪದವಾಗಿ ಸಾವನ್ನಪ್ಪಿದ ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ, ತಪ್ಪಿತಸ್ಥರು ಏಷ್ಟೇ ಬಲಾಢ್ಯರಾಗಿದ್ದರೂ ಕೂಡ ಅವರನ್ನು ತಕ್ಷಣ ಬಂಧಿಸಿ ಉಗ್ರಶಿಕ್ಷೆ ನೀಡಿ ಮತ್ತು ಪರೇಶ ಮೇಸ್ತನ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಮತ್ತು ಸ್ಥಳೀಯ ಶಾಸಕಿ ಶಾರದಾ ಶೇಟ್ಟಿ ಆಗ್ರಹಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಶಾಸಕಿ ಶಾರದ ಶೆಟ್ಟಿ ಮತ್ತು ಮೃತ ಪರೇಶ ಮೇಸ್ತನ ತಂದೆಯ ಆಗ್ರಹದಂತೆ ನಡೆದ ಘಟನೆಯ ಕುಲಂಕುಶ ತನಿಖೆ ನಡೆಸುವಂತೆ ಕೇಂದ್ರದ ಸಿ.ಬಿ.ಐ. ಸಂಸ್ಥೆಗೆ ತನಿಖೆಯ ಜವಾಬ್ದಾರಿ ವಹಿಸಿ ತಮ್ಮ ಪಾರದರ್ಶಕತೆ ಮೆರೆದರು. ಅಮಾಯಕ ಪರೇಶ ಮೆಸ್ತ ಸಾವನ್ನಪ್ಪಿ ಇಂದಿಗೆ ಸರಿ ಸುಮಾರು 66 ದಿನಗಳು ಕಳೆಯುತ್ತಾ ಬಂದಿದೆ. ಪರೇಶ ಮೇಸ್ತನ ಶವ ಪತ್ತೆಯಾದ ಕೇವಲ 5 ದಿನದಲ್ಲೇ ಡಿಸೆಂಬರ 13 ರಂದು ರಾಜ್ಯ ಸರಕಾರ ಸಮಗ್ರ ತನಿಖೆ ನಡೆಸುವಂತೆ ಸಿ.ಬಿ.ಐ.ಗೆ ಪತ್ರ ಬರೆದಿದೆ. ಸಿ.ಬಿ.ಐ. ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಶ್ರೇಷ್ಠ ತನಿಖಾ ಸಂಸ್ಥೆ ಎಂದು ಹೆಸರು ಪಡೆದುಕೊಂಡಿದೆ. ಆದರೆ ಹಿಂದಿನ ಕಾಂಗ್ರೆಸ್ ನೇತ್ರತ್ವದ ಸರಕಾರ ಇದ್ದಾಗ ಬಿ.ಜೆ.ಪಿ. ಯವರು ಸಿ.ಬಿ.ಐ. ನ್ನು ಚೋರ್ ಬಚಾವ್ ಸಂಸ್ಥೆ ಎಂದು ಕರೆಯುತ್ತಿದ್ದರು.
ಆದರೆ ಅದೇ ಸಿ.ಬಿ.ಐ. ಸಂಸ್ಥೆ ಇಂದು ಬಿ.ಜೆ.ಪಿ. ನೇತ್ರತ್ವದ ಸರಕಾರದ ಅಧಿನದಲ್ಲಿದೆ. ಆದರೂ ನಮಗೆ ಸಿ.ಬಿ.ಐ ಸಂಸ್ಥೆಯ ಮೇಲೆ ಅದೊಂದು ಉತ್ಕ್ರಷ್ಟ ಸಂಸ್ಥೆ ಅನ್ನುವ ನಂಬಿಕೆ ಇದೆ. ಆದರೆ 60 ದಿನಗಳು ಕಳೆದರೂ ಕೇಂದ್ರ ಸರಕಾರ ಯಾಕೆ ಸಿ.ಬಿ.ಐ. ಮೇಲೆ ಒತ್ತಾಯ ಹೇರಿ ಶೀಘ್ರ ತನಿಖೆ ಕೈಗೊಂಡು ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯಿಸುತ್ತಿಲ್ಲಾ ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಮ್ಮ ಜಿಲ್ಲೆಯ ಕೇಂದ್ರದ ಪ್ರಭಾವಿ ಸಚಿವರಾದ ಅನಂತಕುಮಾರ ಹೆಗಡೆ ಯಾಕೆ ಶೀಘ್ರ ತನಿಖೆ ಕೈಗೊಳ್ಳಲು ಕೇಂದ್ರದ ಗೃಹ ಮಂತ್ರಿಗಳಿಗೆ ಒತ್ತಾಯಿಸುತ್ತಿಲ್ಲ. ಅಥವಾ ಮುಂಬರುವ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಈ ವಿಷಯವನ್ನು ಜೀವಂತವಾಗಿಟ್ಟುಕೊಳ್ಳುವ ಹುನ್ನಾರವೇ ಯಾವುದು ಅರ್ಥವಾಗುತ್ತಿಲ್ಲಾ. ಕಾರಣ ಯಾರು ಕೂಡ ಸಾವಿನ ಮನೆಯಲ್ಲಿ ರಾಜಕೀಯ ಮಾಡದೇ ಕೇಂದ್ರದ ಅದೀನದಲ್ಲಿರುವ ಸಿ.ಬಿ.ಐ. ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಶೀಘ್ರ ತನಿಖೆ ನಡೆಸುವಂತೆ ಒತ್ತಾಯಿಸೋಣಾ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪರೇಶ ಮೇಸ್ತನ ಮನೆಗೆ ಬರುವಾಗ ಅವರದೇ ಸರಕಾರದ ಸಿ.ಬಿ.ಐ. ತನಿಖಾ ಸಂಸ್ಥೆಯ ತನಿಖಾಧಿಕಾರಿಗಳನ್ನು ಕರೆತಂದು ನೊಂದ ಪರೇಶ ಮೇಸ್ತನ ಕುಟುಂಬಕ್ಕೆ ಇನ್ನೊಂದು ವಾರದಲ್ಲಿ ನ್ಯಾಯ ಒದಗಿಸಿಕೊಡುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿನಾಯಕ ಶೇಟ್, ದಾಮೋದರ ನಾಯ್ಕ, ಲಿಲ್ಲಿ ಫರ್ನಾಂಡಿಸ್, ಬಿ.ಸಿ.ಸಿ. ಕಾರ್ಯದರ್ಶಿ ಉಮಾ ಮೇಸ್ತ, ರಾಧಾ ಪಾವಸ್ಕರ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಾಯಸ್, ಕಾಂಗ್ರೆಸ್ ಮೀನುಗಾರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ ತಾಂಡೇಲ್, ಸ್ಥಳೀಯ ಅಧ್ಯಕ್ಷ ಮಂಜುನಾಥ ಖಾರ್ವಿ, ಪ್ರಚಾರ ಸಮಿತಿ ಉಪಾಧ್ಯಕ್ಷ ವಿನಾಯಕ ನಾಯ್ಕ, ಪಕ್ಷದ ಮುಖಂಡರಾದ ಮರಿಯಾ ಗೊನ್ಸಾಲ್ವಿಸ್, ಶೇಖರ ಚಾರೋಡಿ, ಗಣಪತಿ ಮೇಸ್ತ, ಕೃಷ್ಣ ಖಾರ್ವಿ, ಇನ್ನು ಮುಂತಾದವರಿದ್ದರು.