ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಂತರ ಇದೀಗ ಮೂವರು ಚುನಾವಣಾ ಆಯುಕ್ತರ ಸಂಬಳ ಸಹ ಎರಡು ಪಟ್ಟು ಹೆಚ್ಚಳವಾಗಿದೆ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಆಯುಕ್ತರ ಪರಿಷ್ಕೃತ ಸಂಬಳ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವೇತನಕ್ಕೆ ಸರಿ ಸಮವಾಗಿ ಏರಿಕೆಯಾಗಿದೆ.
ಕಳೆದ ಜನವರಿ 25ರಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಿದೆ. ಚುನಾವಣಾ ಆಯೋಗದ ಕಾಯ್ದೆ 1991ರ ಅನ್ವಯ ಚುನಾವಣಾ ಆಯುಕ್ತರ ಸಂಬಳವು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವೇತನಕ್ಕೆ ಸಮನಾಗಿರಬೇಕು. ಹೀಗಾಗಿ ಸಹಜವಾಗಿಯೇ ಮೂವರು ಚುನಾವಣಾ ಆಯುಕ್ತರ ಸಂಬಳ ದುಪ್ಪಟ್ಟಾಗಲಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವೇತನ 90 ಸಾವಿರದಿಂದ 2.50 ಲಕ್ಷಕ್ಕೆ ಏರಿಕೆಯಾಗಿದ್ದು, ಚುನಾವಣಾ ಆಯುಕ್ತರ ವೇತನವೂ 2.50 ಲಕ್ಷಕ್ಕೆ ಏರಿಕೆಯಾಗಲಿದೆ. ವೇತನ ಹೆಚ್ಚಳ ಜನವರಿ 1, 2016ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು, ಮಾಜಿ ಮುಖ್ಯ ಚುನಾವಣಾ ಆಯುಕ್ತರಿಗೆ ಮತ್ತು ಇಬ್ಬರು ಚುನಾವಣಾ ಆಯುಕ್ತರಿಗೆ ಇದರ ಲಾಭ ದೊರೆಯಲಿದೆ.