ಕಲಬುರ್ಗಿ: ಬಿಜೆಪಿ ನಾಯಕರು ಪ್ರತಿ ಬಾರಿ ತಾವು ದಲಿತರ ಮನೆಯಲ್ಲಿ ಊಟ ಮಾಡಿದೆವು, ಉಪಾಹಾರ ಸೇವಿಸಿದೆವು, ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿದೆವು ಎಂದು ಹೇಳುತ್ತಾರೆ. ಹಾಗಾದರೆ ದಲಿತರೇನು ಪಾಪಿಗಳಾ? ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ವೈಫೈ ಸೌಲಭ್ಯ ಸೇರಿದಂತೆ ಇತರೆ ಯೋಜನೆಗಳ ಲೋಕಾಪರ್ಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು ಕೊಳೆಗೇರಿಯಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಆದರೆ ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ಮಾಡುವುದೇ ದೊಡ್ಡ ಸಾಧನೆ ಎಂಬಂತೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದಲಿತರೇನು ವಿಷ ಉಣ್ಣಿಸುತ್ತಾರಾ?, ಎಲ್ಲರೂ ಊಟ ಮಾಡುವುದನ್ನೇ ಅವರೂ ಮಾಡುತ್ತಾರೆ, ಅದನ್ನೇ ಬಡಿಸುತ್ತಾರೆ. ಅವರ ಮೈಯಲ್ಲೂ ಕೆಂಪು ರಕ್ತವೇ ಹರಿಯುತ್ತಿದೆ. ಇವರು ಜಾತ್ರೆಯಲ್ಲಿ ಒಂದು ದಿನ ತೇರು ಎಳೆದು ನಾವೇ ಎಳೆದೆವು, ನಾವೇ ಎಳೆದೆವು ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರನ್ನು ಅಸ್ಪೃಶ್ಯತೆಯಲ್ಲಿ ಇಟ್ಟವರೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು. ಮನುಸ್ಮೃತಿ, ಬಿಜೆಪಿಯ ದಲಿತ ವಿರೋಧಿ ನೀತಿಯಿಂದಾಗಿ ಅವರು ಇಂದಿಗೂ ಬವಣೆ ಪಡುವಂತಾಗಿದೆ ಎಂದರು.