ಗೋಕರ್ಣ: ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಮಹಾಭಲೇಶ್ವರ ಮಹಾರಥೋತ್ಸವವು ಸಹಸ್ರಾರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು.

ಭಕ್ತರು ಶ್ರೀ ಹರ…ಹರ ….ಮಹಾದೇವ ,ಜಯಶಂಕರ ಎಂಬ ಘೋಷಣೆ ಕೂಗುತ್ತ ಸಂಭ್ರಮದ ರಥೋತ್ಸವಕ್ಕೆ ಸಾಕ್ಷಿಯಾದರು. ಮಧ್ಯಾಹ್ನ 3 ಗಂಟೆಯಿಂದ ಮಹಾಭಲೇಶ್ವರ ರಥೋತ್ಸವಕ್ಕೆ ಸಿದ್ಧತೆ ನಡೆದಿತ್ತು. ಸಂಜೆ 4ಗಂಟೆಗೆ ಗೋಕರ್ಣದ ರಥಬೀದಿಯಲ್ಲಿ ರಥೋತ್ಸವ ಪ್ರಾರಂಭವಾಗಿ 4.45ಕ್ಕೆ ಸಂಪನ್ನಗೊಂಡಿತು. ರಥದ ಜಾಗದಿಂದ ವೆಂಕಟ್ರಮಣ ದೇವಾಲಯದವರೆಗೂ ಶ್ರೀ ಮಹಾಭಲೇಶ್ವರ ರಥವನ್ನು ಭಕ್ತರು ಎಳೆದು ಭಕ್ತಿ ಭಾವ ಮೆರೆದರು.

RELATED ARTICLES  ಶಾಸನವಾಡ ಕಾಳಿ ನದಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ

ಅರ್ಚಕ ವೇ.ಗಜಾನನ ಗಣಪತಿ ಭಟ್ ಹಿರೇ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಬೆಳಗಿನಿಂದ ಪ್ರಾರಂಭಗೊಂಡಿದ್ದವು. ಲೋಕೋಪಯೋಗಿ ಇಲಾಖೆಯಿಂದ ರಥದ ತಾಂತ್ರಿಕ ತಪಾಸಣೆಯನ್ನು ನಿರ್ವಹಿಸಲಾಯಿತು. ತಾಂತ್ರಿಕ ಸಲಹೆಗಾರ ಗಂಗಾಧರ ಆಚಾರಿ ಮತ್ತು ಖಾರ್ವಿ ಗಾಬಿತ ಜನಾಂಗದವರು ರಥೋತ್ಸವದ ಸಂದರ್ಭದಲ್ಲಿ ಸೇವೆ ಸಲ್ಲಿಸಿದರು.

ರಥ ನಿರ್ಮಾಣಕಾರ ಹಾಲಕ್ಕಿ ಜನಾಂಗದ ಪ್ರಮುಖ, ವಿವಿಧ ಸೇವಾಕಾರ‌್ಯದಲ್ಲಿ ತೊಡಗುವ ಮೂಲಕ ರಥೋತ್ಸವಕ್ಕೆ ಚೈತನ್ಯ ತುಂಬಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹಗ್ಗದ ಸಹಾಯದಿಂದ ಜನಸಂದಣಿ ನಿಯಂತ್ರಿಸುವಲ್ಲಿ ಸಫಲರಾದರು.

RELATED ARTICLES  ಬೈಕ್ ಅಪಘಾತ : ಇಬ್ಬರು ಸಾವು

ಹಿಂದಿನ ವರ್ಷ ಭಾಗವಹಿಸಿದ್ದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಅನುಪಸ್ಥಿತಿ ಭಕ್ತರಲ್ಲಿ ಕೊಂಚ ನಿರಾಸೆ ಉಂಟಾದಂತೆ ಕಂಡುಬಂದಿತು.ಭಕ್ತಾದಿಗಳು ಶಿವರಾತ್ರಿ ಪ್ರಯುಕ್ತ ವಿವಿಧ ತಿಂಡಿ ತಿನಿಸುಗಳ ಖರೀದಿಯಲ್ಲಿ ತೊಡಗಿದ್ದರು.

ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ವಾದ್ಯಮೇಳಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ನೂರಾರು ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.