ಶಿರಸಿ : ರಾಜ್ಯ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಮಾರಿಕಾಂಬಾ ದೇವಿಯು ಆಸಿನಳಾಗುವ ಗದ್ದುಗೆಯ ನವೀಕರಣ ಭಾಗವನ್ನು ಗುರವಾರ ಜಿಲ್ಲಾ ನ್ಯಾಯಾಧೀಶ ವಿಠ್ಠಲ ಧಾರವಾಡಕರ ಉದ್ಘಾಟಿಸಿದರು.
ಇಲ್ಲಿನ ಬಿಡಕಿ ಬೈಲಿನಲ್ಲಿರುವ ಜಾತ್ರಾ ಗದ್ದುಗೆಯ ನವೀಕರಣ ಭಾವವನ್ನು ವಿದ್ಯುಕ್ತವಾಗಿ ಪೂಜೆ, ಪುನಸ್ಕಾರ ನಡೆಸಿ ಹವನ ಮಾಡಿ ದೇವಿಯ ಆಶೀರ್ವಾದವನ್ನು ಪಡೆದು ಸ್ಥಳೀಯ ಶಾಸಕ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರುಗಳ ಸಮ್ಮುಖದಲ್ಲಿ ಜಿಲ್ಲಾ ನ್ಯಾಯಾಧೀಶರು ಲೋಕಾರ್ಪಣೆಗೊಳಿಸಿದರು.
ನಂತರ ಮಾತಾಡಿದ ಜಿಲ್ಲಾ ನ್ಯಾಯಾಧೀಶ ವಿಠ್ಠಲ ಧಾರವಾಡಕರ ಶಿರಸಿಯ ಎಲ್ಲಾ ನಾಗರಿಕರು ಸೇರಿ ವಿಜೃಂಭಣೆಯಿಂದ ಜಾತ್ರೆಯನ್ನು ಮಾಡಬೇಕು. ಹೊರಗಿನಿಂದ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಣ್ಣ ಪುಟ್ಟ ಅಡೆತಡೆಗಳು ಉಂಟಾದಲ್ಲಿ ಸಹಕರಿಸಿ ಜಾತ್ರೆಯನ್ನು ಯಶಸ್ವಿಗೊಳಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದ ಅವರು, ದೇವಿಯೆ ಜಾತ್ರಾ ಗದ್ದಿಗೆಗೆ ಪ್ರಥಮ ಬಾರಿ ಭೇಟಿ ಕೊಟ್ಟಿದ್ದು, ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದರು.
ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಹಿಂದಿನ ಗದ್ದುಗೆ ಅಪಾಯದ ಸ್ಥಿತಿಯಲ್ಲಿತ್ತು. ಆದ ಕಾರಣ ಅದನ್ನು ಜಿಲ್ಲಾ ನ್ಯಾಯಾಧೀಶರ ಗಮನಕ್ಕೆ ತಂದು ಕೆಲಸ ಮಾಡಲಾಗಿದೆ. ಜಾತ್ರೆಯಲ್ಲಿ ಸುಮಾರು ೨೦ ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಅವರಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ದೇವಿಯ ಗದ್ದುಗೆಯು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಇದನ್ನು ನೋಡಿದಲ್ಲಿ ದೇವಿಯ ಆಶೀರ್ವಾದ ನಮ್ಮ ಮೇಲಿದೆ ಎಂಬುದು ತಿಳಿಯುತ್ತದೆ. ಜಾತ್ರೆಯನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮನೋಹರ ಮಲ್ಮನೆ, ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಪಟ್ಟಣ, ಶಾಂತಾರಾಮ ಹೆಗಡೆ, ಪಿಎಸ್ಐ ಮಾದೇಶ ಮುಂತಾದವರು ಇದ್ದರು.