ಹಳಿಯಾಳ: ‘ಖಡ್ಗಂ ಕಪಾಲಂ, ಡಮರಂ ತ್ರಿಶೂಲಂ, ಭುಜೈಶ್ಚ ತುರ್ಬಿ ಚತುರಂ, ವಹಂತಂ! ಆಶೇಷು ಸಂಪತ್ಸು ಖದಾಯಕಾಕ್ಷಂ! ಮಲ್ಲಾರಿನಾಥಂ! ನಮಸಾಸರಾಮಿ, ಏಳು ಕೋಟೆ, ಏಳು ಕೋಟಿ, ಏಳು ಕೋಟ್ಗೋ, ಚಾಂಗವಾಲೋ’ ಎಂಬ ಜಯಘೋಷದೊಂದಿಗೆ ಹಳಿಯಾಳದ ಶ್ರೀ ಮೈಲಾರಲಿಂಗ ದೇವರ ಜಾತ್ರಾ ಉತ್ಸವ ಶಸ್ತ್ರ ಪವಾಡದೊಂದಿಗೆ ಭಕ್ತಿಭಾವದಿಂದ ಜರುಗಿತು.

ಇಲ್ಲಿನ ಜಿಲ್ಲಾ ಕುಸ್ತಿ ಅಖಾಡದ ಬಳಿ ಮೈಲಾರಲಿಂಗ ಜಾತ್ರಾ ಉತ್ಸವ ಗುರುವಾರದಿಂದ ಪ್ರಾರಂಭವಾಗಿದೆ. ರಾತ್ರಿ ಜಾಗರಣೆ, ಮರುದಿನ ದೇವರಿಗೆ ಅಭಿಷೇಕ ನಡೆಯಿತು. ಮಧ್ಯಾಹ್ನ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಯಿಂದ ಸಾಗಿ ಸಂಜೆ ಶಸ್ತ್ರ ಪವಾಡ ನಡೆಯಿತು. ಸಹಸ್ರಾರು ಜನರು ಇದನ್ನು ವೀಕ್ಷಿಸಿದರು.

ಹಿಂದೆ ಪಟ್ಟಣದಲ್ಲಿ ಯಾವುದೇ ರೋಗ ರುಜಿನ, ಕ್ಷಾಮಗಳು ತಲೆ ದೋರಿದಾಗ ಮೈಲಾರಲಿಂಗ ಪಕ್ಕದಲ್ಲಿರುವ ದ್ಯಾಮವ್ವಾ (ಕಾಳಮ್ಮಾ) ತಾಯಿಗೆ ಎಣ್ಣೆ ದೀಪ, ಹಣ್ಣು ಕಾಯಿ ಅರ್ಪಿಸುವುದು ವಾಡಿಕೆಯಿತ್ತು. 1978ರಲ್ಲಿ ಅಂದಿನ ಪುರಸಭೆ ಅಧ್ಯಕ್ಷ ರಾಮಣ್ಣಾ ದೇಶಪಾಂಡೆ ಹಾಗೂ ಮಲ್ಲಪ್ಪಾ ಹುರಕಡ್ಲಿ, ಶ್ರೀಕಾಂತ ಹೂಲಿ ಹಾಗೂ ಇನ್ನಿತರ ಸದಸ್ಯರು ಸೇರಿ ಶ್ರೀಶೈಲ ಮರದ ಎಡಭಾಗದಲ್ಲಿ ಶಿವಲಿಂಗ ಸ್ಥಾಪಿಸಿದರು. ಅಂದಿನಿಂದ ಪ್ರತಿವರ್ಷ ಶಿವರಾತ್ರಿಯ ನಂತರ ಮೈಲಾರಲಿಂಗ ದೇವರ ಜಾತ್ರೆ ನಡೆಯುತ್ತಿದೆ. 1982ರಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಎಂ.ಎಚ್.ಹುರಕಡ್ಲಿ ನೇತೃತ್ವದಲ್ಲಿ ಒಂಬತ್ತು ಜನರನ್ನೊಳಗೊಂಡ ಶ್ರೀ ಮೈಲಾರಲಿಂಗ ದೇವಸ್ಥಾನ ಟ್ರಸ್ಟ್‌ ಸಮಿತಿ ರಚಿಸಲಾಗಿದೆ.

RELATED ARTICLES  ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ರೋಟರ್ಯಾಕ್ಟ್ ಘಟಕದ ಸ್ಥಾಪನೆ

ಅದೇ ವರ್ಷ ಮೈಲಾರ ದೇವಾಲಯ ಸ್ಥಾಪಿಸಿ ಮೈಲಾರಲಿಂಗ ಮತ್ತು ಗಂಗೆ ಮಾಳಮ್ಮಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ಮೈಲಾರ ಜಾತ್ರಾ ಉತ್ಸವದ ಎಲ್ಲ ವಿಧಿ ವಿಧಾನಗಳನ್ನು ಬಳ್ಳಾರಿ ಜಿಲ್ಲೆಯ ಮೈಲಾರದ ಪೂಜಾರಿ ಮೈಲಾರಪ್ಯಯ್ಯಾ ಒಡೆಯರ ಉಪಸ್ಥಿತಿಯಲ್ಲಿ ಸ್ಥಳೀಯ ಅರ್ಚಕ ಹನುಮಂತ ನೀಲಪ್ಪಾ ದೊಡ್ಡಮರ್ಡಿ ನೇರವೇರಿಸಿದರು.

RELATED ARTICLES  ಅಂಕೋಲಾದಲ್ಲಿ ಜೂನ್ 9 ಕ್ಕೆ ಅದ್ಧೂರಿ ಯಕ್ಷಗಾನ.

ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ, ಮುಖಂಡ ಪ್ರಶಾಂತ ದೇಶಪಾಂಡೆ ವಿಶೇಷ ಪೂಜೆ ಸಲ್ಲಿಸಿದರು. 1.5 ಕೆ.ಜಿ.ಯ ಬೆಳ್ಳಿ ಕವಚದ ಸೇವೆ ಒದಗಿಸಿದ ನಿಂಗಪ್ಪಾ ಫಕೀರಪ್ಪ ಕೆಂಗಂಡ ಧಾರವಾಡ ಹಾಗೂ ಉತ್ಸವಕ್ಕೆ ಡೊಳ್ಳು ನೀಡಿದ ಗಜಾನಂದ ಮಾರುತಿ ದೊಡ್ಮನಿ ಮತ್ತು ಬೆಳ್ಳಿಯ ಧಾರಾಪಾತ್ರೆ ನೀಡಿದ ನಾಗರಾಜ ಸಾಣಿಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಮಲ್ಲಪ್ಪಾ ಹುರಕಡ್ಲಿ, ಈಶ್ವರಪ್ಪ ಹರಕುಣಿ, ಯಲ್ಲಪ್ಪಾ ಸಾಣಿಕೊಪ್ಪ, ಪರುಷುರಾಮ ಹರ್ಲಿ, ಶಿವಪ್ಪಾ ಬಾರ್ಕಿ,ಲಕ್ಷ್ಮುಣ ಮೇತ್ರಿ, ಮಾರುತಿ ಕಾಕೋಳ, ದಶರಥ ಸಾಣಿಕೊಪ್ಪ, ಮಂಜು ಮರಾಠಾ,ಬಾಬು ಮರಾಠಾ ಉತ್ಸವದ ಸಿದ್ಧತೆಯಲ್ಲಿ ಮುಂಚೂಣಿಯಲ್ಲಿದ್ದರು.