ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೊಷಣೆ ಮಾಡಿದ ಬಜೆಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಂದಿಷ್ಟು ಕೊಡುಗೆ ದೊರೆತಿವೆ. ಇನ್ನೊಂದಿಷ್ಟು ನಿರೀಕ್ಷೆಗಳು ಬಾಕಿ ಉಳಿದಿವೆ. ಮಲೆನಾಡಿನ ಭಾಗಕ್ಕೆ ನಿರೀಕ್ಷೆಯಂತೆ ವಿಶೇಷ ಕೊಡುಗೆ ದೊರಕಿಲ್ಲ. ಕರಾವಳಿಯ ಬಂದರುಗಳ ಅಭಿವೃದ್ಧಿಗೆ ಮೀನುಗಾರಿಕೆಗೆ ಹೆಚ್ಚಿನ ಅನುದಾನ ದೊರೆತಿದೆ.
ಜಿಲ್ಲೆಗೆ ನೇರವಾಗಿ ದೊರಕಿದ್ದು: ಕಾರವಾರ ಬಂದರಿನಲ್ಲಿ 250 ಮೀಟರ್ ಜಟ್ಟಿ ನಿರ್ವಣಕ್ಕೆ 61 ಕೋಟಿ ರೂ., 425 ಮೀ ಅಲೆ ತಡೆಗೋಡೆ ನಿರ್ವಣಕ್ಕೆ 90 ಕೋಟಿ ರೂ. ಅನುದಾನ ನೀಡಲಾಗಿದೆ. ಮುರ್ಡೆಶ್ವರದಲ್ಲಿ ನಾಡ ದೋಣಿಗಳ ನಿಲುಗಡೆಗೆ ಹೊರ ಬಂದರು ನಿರ್ವಣಕ್ಕೆ ಯೋಜಿಸಲಾಗಿದ್ದು, ಅದರ ಅಧ್ಯಯನಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಜೆಟ್ನ ಇನ್ನು ಕೆಲವು ಘೊಷಣೆಗಳು ಇಡೀ ರಾಜ್ಯಕ್ಕೆ ಅನ್ವಯಿಸಿದರೂ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ. ವನ್ಯಜೀವಿಯಿಂದ ಮೃತಪಟ್ಟವರ ಕುಟುಂಬಕ್ಕೆ ಮಾಸಾಶನ, ಹಾವು ಕಚ್ಚಿ ಮೃತಪಟ್ಟ ರೈತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ, ಕೃಷಿ ಹೊಂಡ, ಪಾಲಿ ಹೌಸ್, ಹನಿ ನೀರಾವರಿ ಯೋಜನೆಗಳಿಗಾಗಿ ಸಾಮಾನ್ಯ ವರ್ಗದವರಿಗೂ ಶೇ. 90 ರಷ್ಟು ಸಬ್ಸಿಡಿ ಒದಗಿಸಲಾಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ ರೂ., ಮಲೆನಾಡು ಅಭಿವೃದ್ಧಿ ಪ್ರಾಧಿಕಾರಕ್ಕೆ 70 ಕೋಟಿ ರೂ. ಹಣ ನೀಡಲಾಗಿದ್ದು, ಇದರಲ್ಲೂ ಜಿಲ್ಲೆಗೆ ಪಾಲು ಲಭಿಸಲಿದೆ. ರಾಜ್ಯದ ಕರಾವಳಿಯ ಆಯ್ದ ಸ್ಥಳದಲ್ಲಿ ತೇಲುವ ಹೋಟೆಲ್ ಅಥವಾ ಹೌಸ್ ಬೋಟ್ ನಿರ್ವಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಜಿಲ್ಲೆಯ ಮುರ್ಡೆಶ್ವರ, ಗೋಕರ್ಣ, ಕಾರವಾರದಲ್ಲಿ ಇದು ಲಭ್ಯವಾಗುವ ಸಾಧ್ಯತೆ ಇದೆ. ಹಾಲು ಉತ್ಪಾದಕ ಸಹಕಾರಿ ಸಂಘದ ಸಿಬ್ಬಂದಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ನೀಡುವುದಾಗಿ ಘೊಷಿಸಿದ್ದು ಜಿಲ್ಲೆಯ ಸಹಕಾರಿ ಸಂಘದ ಸದಸ್ಯರ ಬಹು ದಿನಗಳ ಬೇಡಿಕೆಗೆ ಕೊಂಚ ಮನ್ನಣೆ ಸಿಕ್ಕಂತಾಗಿದೆ.
ಅವೈಜ್ಞಾನಿಕ ಮೀನುಗಾರಿಕೆ ತಡೆಗೆ ಕ್ರಮ
ಗಲಾಟೆಗೆ ಕಾರಣವಾಗಿರುವ ಆಳ ಸಮುದ್ರದಲ್ಲಿ ಬುಲ್ಟ್ರಾಲ್ ಹಾಗೂ ಲೈಟ್ ಫಿಶ್ಶಿಂಗ್ ಮೂಲಕ ಮೀನುಗಾರಿಕೆ ತಡೆಯಲು ಸರ್ಕಾರ ಬಜೆಟ್ನಲ್ಲಿ ಯೋಜನೆ ಘೊಷಿಸಿದೆ. 2500 ಟ್ರಾಲರ್ ದೋಣಿಗಳಿಗೆ ತಲಾ 10 ಸಾವಿರ ರೂ. ವೆಚ್ಚದಲ್ಲಿ ದೊಡ್ಡ ಮೀನುಗಳನ್ನು ಮಾತ್ರ ಹಿಡಿಯಬಲ್ಲ 35 ಎಂ.ಎಂ.ಬಲೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಘೊಷಿಸಲಾಗಿದೆ. ಮೀನುಗಾರ ಮಹಿಳೆಯರಿಗೆ ಮೀನು ಮಾರಾಟ ಬಂಡವಾಳವಾಗಿ ಶೇ. 2ರ ಬಡ್ಡಿಯಲ್ಲಿ ನೀಡಲಾಗುತ್ತಿದ್ದ 50 ಸಾವಿರ ರೂ.ವರೆಗಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲು ಸರ್ಕಾರ ಮುಂದಾಗಿದೆ. ಮತ್ಸ್ಯ ಜೋಪಾಸನೆ ಯೋಜನೆಯಲ್ಲಿ ರಾಜ್ಯದಲ್ಲಿ 10 ಶೀಥಲೀಕರಣ ಘಟಕ ನಿರ್ವಿುಸಲು ಅನುದಾನ ನೀಡಲಾಗಿದ್ದು, ಜಿಲ್ಲೆಗೆ ನಾಲ್ಕೈದು ಶೀಥಲೀಕರಣ ಘಟಕ ಲಭ್ಯವಾಗುವ ಸಾಧ್ಯತೆ ಇದೆ.
ಜಿಲ್ಲಾ ಆಸ್ಪತ್ರೆ ಕಟ್ಟಡಕ್ಕಿಲ್ಲ ಅನುದಾನ
ಸರ್ಕಾರಿ ಮೆಡಿಕಲ್ ಕಾಲೇಜ್ ಇತ್ತೀಚೆಗಷ್ಟೇ ಪ್ರಾರಂಭವಾದ ರಾಜ್ಯದ ಎರಡು ಮೆಡಿಕಲ್ ಕಾಲೇಜ್ ಜತೆ ಆಸ್ಪತ್ರೆ ಕಟ್ಟಡ ನಿರ್ವಣಕ್ಕೆ ಹಣ ನೀಡಲಾಗಿದೆ. ಆದರೆ, ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಬೇಡಿಕೆಗೆ ಮನ್ನಣೆ ದೊರಕಿಲ್ಲ. ಬೀದರ್ ಹಾಗೂ ಗದಗ ಮೆಡಿಕಲ್ ಕಾಲೇಜ್ಗೆ ಕ್ಯಾಥ್ಲ್ಯಾಬ್ (ಹೃದ್ರೋಗ ತಪಾಸಣೆಗೆ) ಮಂಜೂರಾಗಿದೆ. ಆದರೆ, ಜಿಲ್ಲೆಯ ಕರಾವಳಿಯಲ್ಲಿ ಅತಿ ಹೆಚ್ಚು ಹೃದ್ರೋಗ ಪ್ರಕರಣ ಇರುವುದರಿಂದ ಕ್ಯಾಥಲ್ಯಾಬ್ ಬೇಡಿಕೆ ಇದ್ದು ಜಿಲ್ಲೆಗೂ ಈ ಸೌಲಭ್ಯ ನೀಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ಸರ್ಕಾರಿ ಮೆಡಿಕಲ್ ಕಾಲೇಜ್ಗಳ ಶುಶ್ರೂಶಾ ಶಾಲೆಗಳು ಹಾಗೂ ಕಾಲೇಜ್ ಮೂಲ ಸೌಕರ್ಯಕ್ಕೆ ಅನುದಾನ ನೀಡಲಾಗಿದ್ದು, ಅದರಿಂದ ಅನುಕೂಲವಾಗುವ ಸಾಧ್ಯತೆ ಇದೆ.
ಕ್ಯಾನ್ಸರ್ ಆಸ್ಪತ್ರೆ
ರಾಜ್ಯದ ಮೂರು ಕಡೆ ಕ್ಯಾನ್ಸರ್ ಆಸ್ಪತ್ರೆ ನಿರ್ವಣಕ್ಕೆ ಸರ್ಕಾರ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕಾರವಾರದಲ್ಲಿ ಮೆಡಿಕಲ್ ಕಾಲೇಜ್ನ ಕ್ಯಾನ್ಸರ್ ಚಿಕಿತ್ಸಾ ಘಟಕ ಕೂಡ ಸೇರಿದೆ. ಮೂರು ಕೇಂದ್ರಗಳಿಗೆ ಹಣ ಸರಿಯಾಗಿ ಹಂಚಿಕೆ ಮಾಡಿದಲ್ಲಿ ಕಾರವಾರಕ್ಕೆ 5 ಕೋಟಿ ರೂ. ಲಭ್ಯವಾಗಲಿದೆ. ಮೆಡಿಕಲ್ ಕಾಲೇಜ್ನಿಂದ ಕ್ಯಾನ್ಸರ್ ಆಸ್ಪತ್ರೆ ನಿರ್ವಣಕ್ಕೆ ಶಿರವಾಡದಲ್ಲಿ 2.5 ಎಕರೆ ಅರಣ್ಯ ಭೂಮಿಯನ್ನು ಈಗಾಗಲೇ ಮೆಡಿಕಲ್ ಕಾಲೇಜ್ಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಸ್ತಾಂತರಿಸಲಾಗಿದೆ. ಆಸ್ಪತ್ರೆಯ ನೀಲ ನಕ್ಷೆಯು ಆಲ್ ಇಂಡಿಯಾ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ನಿಂದ ಅನುಮೋದನೆಯಾಗಿದೆ. ರೇಡಿಯೋಥೆರಪಿ ಮಷಿನ್ ಅನ್ನು ಮುಂಬೈನ ಟಾಟಾ ಮೆಮೋರಿಯಲ್ ಇನ್ಸ್ಟಿಟ್ಯೂಟ್ ನೀಡುವುದಾಗಿ ತಿಳಿಸಿದೆ. ಈಗ ಸರ್ಕಾರ ಅನುದಾನ ನೀಡಿರುವುದರಿಂದ ಕಟ್ಟಡ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ಐದು ಕೋಟಿ ರೂ. ಅನುದಾನ ಸಿಕ್ಕಲ್ಲಿ, ಪ್ರಯೋಗಾಲಯ, ಎರಡು ವಾರ್ಡ್ಗಳು, ಮತ್ತು ರೇಡಿಯೋ ಥೆರಪಿ ಕೋಣೆಯನ್ನು ಮಾಡಬಹುದು ಎಂದು ಮೆಡಿಕಲ್ ಕಾಲೇಜ್ ನಿರ್ದೇಶಕ ಡಾ.ಎಂ.ಎಲ್.ದೊಡಮನಿ ತಿಳಿಸಿದ್ದಾರೆ.
ಹುಸಿಯಾದ ನಿರೀಕ್ಷೆಗಳು
ರೈತರ ಸಾಲ ಮನ್ನಾ ಮಾಡಿದಾಗಿನಿಂದ ಮೀನುಗಾರರ ಸಾಲ ಮನ್ನಾ ಮಾಡಬೇಕು ಹಾಗೂ ಸಹಕಾರಿ ಸಂಘಗಳಲ್ಲಿರುವ ರೈತರ ಆಸಾಮಿ ಖಾತೆ ಸಾಲ ಮನ್ನಾ ಮಾಡಬೇಕು ಎಂಬ ಬಹು ದಿನಗಳ ಬೇಡಿಕೆಗಳು ಹಾಗೆಯೇ ಉಳಿದಿವೆ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟದ ಕನಸೂ ನನಸಾಗಿಲ್ಲ. ಬೇಲೆಕೇರಿ ಹಾಗೂ ಇತರೆ ಬಂದರುಗಳ ಅಭಿವೃದ್ಧಿಗೂ ಅನುದಾನ ದೊರಕಿಲ್ಲ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಈ ಬಾರಿ ಯಾವುದೇ ಅನುದಾನ ದೊರೆತಿಲ್ಲ.