ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಬಹಳ ವರ್ಷದ ಬೇಡಿಕೆಯಾಗಿದ್ದ, ಬಹು ನಿರೀಕ್ಷಿತ ಸಿಗಂಧೂರಿನ ತುಮರೀ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಫೆ. 19ರಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಶಿಲಾನ್ಯಾಸ ಮಾಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸೇತುವೆ ಮಂಜೂರಿಗೆ ಕಾರಣಕರ್ತ ಸಾಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿರೂಪ್ಪನವರೂ ಹಾಜರಿರಲಿದ್ದಾರೆ ಎಂದರು.
ಸಚಿವ ನಿತಿನ್ ಗಡ್ಕರಿ ಅವರು ಫೆ.19 ರಂದು ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಳಸವಳ್ಳಿಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಈ ಯೋಜನೆ ಕುರಿತು ಸಾಂಸದ ಯಡಿಯೂರಪ್ಪ ಅವರು ಹಲವಾರು ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿದ್ದಾರೆ. ಅದರ ಪ್ರತಿಫಲವಾಗಿ ಈ ಸೇತುವೆಗೆ ಕೇಂದ್ರದಿಂದ ಹಣ ಮಂಜೂರಾಗಿದೆ ಎಂದರು.
ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿರುವುದು ಅತ್ಯಂತ ಹೈಟೆಕ್ ತಂತ್ರಜ್ಞಾನದ ಸೇತುವೆಯಾಗಿದೆ. ದೇಶದಲ್ಲಿಯೇ ಉತ್ತರಾಖಂಡದ ನಂತರದ ವಿಶೇಷ ಸೇತುವೆ ಇದಾಗಿರಲಿದೆ. ಈ ಸೇತುವೆಯಿಂದ ಸುಮಾರು 5 ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಜನರಿಗೆ ಅನುಕೂಲ ಆಗಲಿದೆ. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ ಎಂದರು.
ಶಿವಮೊಗ್ಗ- ತುಮಕೂರು ಚತುಷ್ಪಥಕ್ಕೂ ಚಾಲನೆ:
ಜಿಲ್ಲೆಯ ಜನರ ಬಹು ವರ್ಷದ ಕನಸಾಗಿದ್ದ ಶಿವಮೊಗ್ಗ-ತುಮಕೂರು ಚತುಷ್ಪಥ ರಸ್ತೆ ನಿರ್ಮಾಣಕ್ಕೂ, ಪ್ರಧಾನಿ ನರೇಂದ್ರಮೋದಿ ಆಸಕ್ತಿ ತೋರಿಸಿದ್ದಾರೆ. ನಾಲ್ಕು ಸಾವಿರ ಕೋಟಿ ರೂ. ಯೋಜನೆಗೆ ಸಮ್ಮತಿ ಸೂಚಿಸಿದ್ದು, ಇದರ ಶಂಕುಸ್ಥಾಪನೆಯೂ ಅಂದು ನಡೆಯಲಿದೆ ಎಂದರು.
ಫೆ.27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜನ್ಮದಿನ ಐತಿಹಾಸಿಕವಾಗಬೇಕೆಂಬ ದೃಷ್ಟಿಯಿಂದ ದಾವಣಗೆರೆಯಲ್ಲಿ ರೈತ ಸಮಾವೇಶ ಆಯೋಜನೆ ಮಾಡಲಾಗಿದೆ. ಪ್ರಧಾನಿ ಮೋದಿ ಸಮಾವೇಶಕ್ಕೆ ಬರಲಿದ್ದಾರೆ. ರಾಜ್ಯದ ರೈತರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಾಜಿ ಸಾಂಸದ ಆಯನೂರು ಮಂಜುನಾಥ್, ಡಿ.ಎಸ್.ಅರುಣ್, ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಗೀತಾ ರವಿಶಂಕರ್, ರತ್ನಾಕರ ಶಣೈ, ಹಿರಣ್ಣಯ್ಯ, ವಿಕ್ರಂ ಇದ್ದರು.