ಅರುಣಾಚಲದ ತವಾಂಗ್ ಜಿಲ್ಲೆಯ ಅತ್ಯಂತ ಹಿಂದುಳಿದ ಈ ಹಳ್ಳಿ ಈಗ ಏಷ್ಯಾದಲ್ಲೇ ಅತೀ ಶ್ರೀಮಂತ ಹಳ್ಳಿ ಎಂದು ಕರೆಸಿಕೊಂಡಿದೆ. ಅದೂ ಮೊನ್ನೆ ಸೋಮವಾರ ಒಂದೇ ಬಾರಿಗೆ ಅತೀ ಕಡುಬಡವರಾಗಿದ್ದ 31 ಕುಟುಂಬಗಳಿದ್ದ ಈ ಹಳ್ಳಿಯ ಜನ ಕೋಟ್ಯಾಧಿಪತಿಗಳಾಗಿದ್ದಾರೆ.
ಅದ್ಹೇಗೆ ಗೊತ್ತಾ? ನಮ್ಮ ಭಾರತೀಯ ಸೇನೆಯ ಕೃಪೆಯಿಂದ! ಹೌದು, 5 ವರ್ಷಗಳ ಹಿಂದೆ ಸೇನೆಯು ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಸೋಮವಾರ ಅದರ ಪರಿಹಾರ ಹಣವನ್ನು ಹಳ್ಳಿ ಜನರಿಗೆ ವಿತರಿಸಲಾಯಿತು. ಒಒಬ್ಬೊಬ್ಬರಿಗೂ ಕನಿಷ್ಠವೆಂದರೆ ಒಂದು ಕೋಟಿ ಹಣ ದೊರೆತಿದೆ.
ಸುಮಾರು 200 ಎಕರೆ ಭೂಮಿ ಸೇನೆಗೆ ಬಿಟ್ಟುಕೊಟ್ಟ ಹಳ್ಳಿಗರಿಗೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ರಕ್ಷಣಾ ಇಲಾಖೆಯಿಂದ ಬಂದ ಹಣದಲ್ಲಿ ಬೊಮ್ಜಾದ ಎಲ್ಲ ಮನೆಗಳಿಗೆ ಸರಾಸರಿ ಒಂದು ಕೋಟಿ ರು.ಗಿಂತ ಹೆಚ್ಚಿನ ಪರಿಹಾರ ವಿತರಿಸಿದರು. ಅದರ ಒಟ್ಟು ಮೊತ್ತ .40,80,38,400. ಇದರಲ್ಲಿ ಒಂದು ಕುಟುಂಬಕ್ಕೆ 6.73 ಕೋಟಿ, ಇನ್ನೊಂದು ಕುಟುಂಬಕ್ಕೆ 2.44 ಕೋಟಿ, ಇನ್ನುಳಿದ 29 ಕುಟುಂಬಗಳಿಗೆ ಸರಾಸರಿ 1.09 ಕೋಟಿ ರು. ಪರಿಹಾರ ಲಭಿಸಿದೆ.
ಚೀನಾದ ಗಡಿಯಲ್ಲಿರುವ ಬೊಮ್ಜಾ ಗ್ರಾಮ ಸೇನಾಪಡೆಗೆ ವ್ಯೂಹಾತ್ಮಕ ಸ್ಥಳವಾಗಿದ್ದು, ಇಲ್ಲಿ ತವಾಂಗ್ ಗ್ಯಾರಿಸನ್‌ನ ತುಕಡಿಗಳನ್ನು ಸ್ಥಾಪಿಸಲು ಭಾರತೀಯ ಸೇನೆಯು ಭೂಮಿ ವಶಪಡಿಸಿಕೊಂಡಿದೆ.